ತುಮಕೂರು: ಜಿಲ್ಲೆಯ ತಿಪಟೂರಿನಲ್ಲಿ ಎತ್ತಿನಹೊಳೆ ಕಾಮಗಾರಿ ಗುಂಡಿಯಲ್ಲಿ ಬಿದ್ದು ಇಬ್ಬರು ಮಕ್ಕಳ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಶನಿವಾರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಸಾಂತ್ವಾನ ಹೇಳಿದೆ.
ಹುಚ್ಚನಟ್ಟಿಯ ಮಕ್ಕಳ ಮನೆಗೆ ಭೇಟಿ ನೀಡಿದ ಮಕ್ಕಳ ರಕ್ಷಣಾ ಆಯೋಗದ ತಿಪ್ಪೇಸ್ವಾಮಿ ಕೆ.ಟಿ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪರವಾಗಿ ಸಾಂತ್ವಾನ ತಿಳಿಸಿದರು.
ಮಕ್ಕಳನ್ನು ಕಳೆದುಕೊಂಡವರ ಶೋಕ ನಿರಂತರವೆಂಬಂತೆ ಪೋಷಕರ ದುಃಖ ಮಡುಗಟ್ಟಿತ್ತು. ವಿವಿಧ ಇಲಾಖೆಗಳಿಂದ ಸಿಗಬಹುದಾದ ಪರಿಹಾರವನ್ನು ಆ ಕುಟುಂಬಕ್ಕೆ ಕೊಡಿಸುವ ಕೆಲಸವನ್ನು ಆಯೋಗ ಮಾಡಲಿದೆ. ಇಂತಹ ಘಟನೆಗಳು ಮರುಕಳಿಸದಿರಲೆಂದು ಆಶಿಸುತ್ತೇನೆ ಎಂದು ತಿಪ್ಪೇಸ್ವಾಮಿ ಕೆ.ಟಿ. ತಿಳಿಸಿದರು.
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ವರದಿ ಪಡೆದಿದ್ದೇವೆ. ಕಾಮಗಾರಿ ಸ್ಥಳಗಳಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ಇರುವುದು ಕಡ್ಡಾಯ. ಅಜಾರೂಕತೆ ವಹಿಸಿದಲ್ಲಿ ಈ ರೀತಿಯ ದುರ್ಘಟನೆಗೆ ಕಾರಣವಾಗುತ್ತವೆ. ಈ ಸಂಬಂಧ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಎತ್ತಿನಹೊಳೆ ಯೋಜನೆಯ ಸದರಿ ಕಾಮಗಾರಿಯ ಜವಾಬ್ದಾರಿಹೊತ್ತ ಕಾರ್ಯಪಾಲಕ ಅಭಿಯಂತರರು, ಕಾಂಟ್ರಾಕ್ಟರ್, ಹಾಗೂ ಇನ್ನಿತರ ಅಧಿಕಾರಿಗಳಿಗೆ ಶೀಘ್ರದಲ್ಲೇ ಸಮನ್ಸ್ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಸ್ಥಳ ಭೇಟಿಯ ವೇಳೆ ಜೊತೆಗಿದ್ದ ತಿಪಟೂರು ತಾಲ್ಲೂಕಿನ ಬಿಇಓ ರವರಿಗೆ ಮೃತಪಟ್ಟ ಮಕ್ಕಳಿಗೆ ಶಿಕ್ಷಕರು ಮತ್ತು ಮಕ್ಕಳ ಕಲ್ಯಾಣ ನಿಧಿಯಿಂದ ಸೂಕ್ತ ಪರಿಹಾರ ನೀಡಲು ಶೀಘ್ರವೇ ಕ್ರಮವಹಿಸಲು ಶಿಪಾರಸ್ಸು ಮಾಡಿರುವುದಾಗಿ ತಿಪ್ಪೇಸ್ವಾಮಿ ತಿಳಿಸಿದರು.
ನಂತರ ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಗ್ರಾಮ ಪಂಚಾಯ್ತಿಗೆ ಭೇಟಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಮ್ಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಮಕ್ಕಳ ರಕ್ಷಣೆಗೆ ವಹಿಸಬೇಕಾದ ಕ್ರಮಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಆ ಊರಿನ ಶಾಲೆಯ ಮುಂಭಾಗವೇ ಇರುವ ಕೊಳಚೆ ನೀರು ತಂಬಿರುವ ಕಟ್ಟೆಗೆ ತಡೆಬೇಲಿ ನೀಡಿ, ಸ್ವಚ್ಚಗೊಳಿಸಲು ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಇದೇ ವೇಳೆ ತಿಪ್ಪೇಸ್ವಾಮಿ ಸೂಚಿಸಿದರು.
ಭೇಟಿಯ ವೇಳೆ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಜೊತೆಗಿದ್ದು ಸಹಕರಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q