ತುಮಕೂರು: ಜಿಲ್ಲೆ ತಿಪಟೂರು ತಾಲ್ಲೂಕಿನ ಬಳುವನೇರಲು ಗ್ರಾಮಪಂಚಾಯ್ತಿಯಲ್ಲಿ ಅಕ್ರಮವಾಗಿ ಸ್ವಚ್ಚತಾ ಕಾಮಗಾರಿ ಬಿಲ್ ಮಾಡಲಾಗಿದೆ ಎಂದು ಗ್ರಾಮಪಂಚಾಯ್ತಿ ಸದಸ್ಯ ಸಿದ್ದಯ್ಯ ಮಾಡುತ್ತಿರುವ ಆರೋಪ ನಿರಾಧಾರವಾಗಿದ್ದು, ರಾಜಕೀಯ ಪ್ರೇರಿತವಾಗಿ ಸಿದ್ದಯ್ಯ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಳುವನೇರಲು ಗ್ರಾಮಪಂಚಾಯ್ತಿ ಅಧ್ಯಕ್ಷೆ ಲಲಿತಾ ಆಕ್ಷೇಪ ವ್ಯಕ್ತಪಡಿಸಿದ್ದು, ಸದಸ್ಯರ ವರ್ತನೆ ತೀವ್ರ ಖಂಡನೀಯ ಎಂದು ತಿಳಿಸಿದರು.
ನಗರದ ಕಲ್ಪತರು ಗ್ರ್ಯಾಂಡ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿ, ಬಳುವನೇರಲು ಗ್ರಾಮಪಂಚಾಯ್ತಿ ಸದಸ್ಯ ಸಿದ್ದಯ್ಯ ನನ್ನ ಮೇಲೆ ಸುಳ್ಳು ಅರೋಪ ಮಾಡುತ್ತಿದ್ದಾರೆ.
ನಮ್ಮ ಗ್ರಾಮಪಂಚಾಯ್ತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದೇವೆ. ಗ್ರಾಮ ಪಂಚಾಯ್ತಿ ನಿಯಮಗಳಂತೆ ಸರ್ವಸದಸ್ಯರ ಸಭೆಯ ನಿರ್ಣಯದಂತೆ ಆಡಳಿತ ನಡೆಸಲಾಗುತ್ತಿದ್ದು, ಸಿದ್ದಯ್ಯ ಎನ್ನುವ ಸದಸ್ಯರು ನಾನು ದಲಿತ ಮಹಿಳೆ ಎನ್ನುವ ಕಾರಣಕ್ಕೆ ಸುಳ್ಳು ಆರೋಪಮಾಡಿ ತೇಜೋವಧೆ ಮಾಡುತ್ತಿದ್ದಾರೆ. ಗ್ರಾಮ ಪಂಚಾಯ್ತಿಯಲ್ಲಿ ಯಾವುದೇ ಕೆಲಸಗಳನ್ನ ಮಾಡದೇ ಬಿಲ್ ಮಾಡಿಕೊಡಿ ಎಂದು ಒತ್ತಾಯಿಸುತ್ತಿದ್ದು, ನನಗೆ ಬಿಲ್ ಮಾಡಿಕೊಡದಿದ್ದರೆ, ಅಧ್ಯಕ್ಷರು ಹಾಗೂ ಪಿಡಿಒ ಮೇಲೆ ಸುಳ್ಳು ದೂರು ನೀಡಿ ಕೆಟ್ಟ ಹೆಸರು ಬರುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದು ಸಿದ್ದಯ್ಯ ಅವರ ಮೇಲೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮಪಂಚಾಯ್ತಿ ಸದಸ್ಯ ಮರುಳಪ್ಪ ಮಾತನಾಡಿ, ಬಳುವನೇರಲು ಗ್ರಾಮಪಂಚಾಯ್ತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಗ್ರಾಮಪಂಚಾಯ್ತಿ ನಿಯಮದಂತೆ ಆಡಳಿತ ನಡೆಸಲಾಗುತ್ತಿದೆ. ಸಿದ್ದಯ್ಯ ನವರ ಅಕ್ರಮಗಳಿಗೆ ಅವಕಾಶ ನೀಡದ ಕಾರಣ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳು ಆರೋಪ ಮಾಡುತ್ತಿರುವ ಸಿದ್ದಯ್ಯ ನವರ ಮೇಲೆ ಕಾನೂನು ಕ್ರಮಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಘೋಷ್ಠಿಯಲ್ಲಿ ಉಪಾಧ್ಯಕ್ಷ ಹರೀಶ್, ಸದಸ್ಯರಾದ ಹಿರೇಲಿಂಗಯ್ಯ, ಭಾಗ್ಯಮ್ಮ, ಪ್ರಮೀಳಾ ಕೆ.ಎಸ್.ಶಿವಸ್ವಾಮಿ ಬಿ. ಮುಂತಾದವರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q