ವರದಿ : ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ಚೀಲಗಾನಹಳ್ಳಿ ಸಮೀಪ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಘಟಕ ಸ್ಥಾಪನೆಗೆ 15 ವರ್ಷದಿಂದ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ ಕೊರಟಗೆರೆ ಆಡಳಿತ ಮತ್ತು ಗಣಿ ಇಲಾಖೆ ವಿರುದ್ದ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರುಸೇನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಕೊರಟಗೆರೆ ಪಟ್ಟಣದ ಮಿನಿ ವಿಧಾನಸೌಧಕ್ಕೆ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಹಾಗೂ ಚೀಲಗಾನಹಳ್ಳಿ ರೈತರಿಂದ ಟ್ರಾಕ್ಟರ್ ಸಮೇತ ಮುತ್ತಿಗೆ ಹಾಕಿ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಘಟಕ ನಿರ್ಮಾಣಕ್ಕೆ ಸರಕಾರಿ ಅಧಿಕಾರಿಗಳೇ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಧನಂಜಯರಾಧ್ಯ ಮಾತನಾಡಿ, ತುಮಕೂರು ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಪ್ರಸ್ತುತ ಇರುವ ಗಣಿಗಾರಿಕೆಯಿಂದ ಪರಿಸರ ಹಾಳಾಗಿದೆ. ಈಗ ಮತ್ತೆ ಕೊರಟಗೆರೆಯಲ್ಲಿ ಗಣಿಗಾರಿಕೆ ಪ್ರಾರಂಭಕ್ಕೆ ಅಧಿಕಾರಿಗಳೇ ಪರೋಕ್ಷವಾಗಿ ಬೆಂಬಲ ನೀಡುತ್ತಿರೋದು ನಮ್ಮ ದುರ್ದೈವ ಎಂದು ಕಿಡಿಕಾರಿದರು.
ಕೊರಟಗೆರೆ ರೈತಸಂಘದ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಕೊರಟಗೆರೆ ಕ್ಷೇತ್ರವು ಮಿನಿ ಬಳ್ಳಾರಿ ಆಗುವತ್ತಾ ಹೆಜ್ಜೆ ಇಟ್ಟಿದೆ. ನಮ್ಮ ಕ್ಷೇತ್ರದ ಬೆಟ್ಟ-ಗುಡ್ಡಗಳನ್ನು ಅಧಿಕಾರಿ ವರ್ಗ ಮಾರಾಟಕ್ಕೆ ಇಟ್ಟಿದ್ದಾರೇ. ನಮ್ಮ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಕ್ಷಣವೇ ಗಣಿಗಾರಿಕೆ ನಡೆಸದಂತೆ ಅಧಿಕಾರಿಗಳ ಕಟ್ಟುನಿಟ್ಟಿನ ಆದೇಶ ಮಾಡಬೇಕಿದೆ ಎಂದರು.
ಪ್ರತಿಭಟನೆಯಲ್ಲಿ ರೈತಸಂಘದ ಲೊಕೇಶ್, ಪ್ರಸನ್ನ, ರಾಮಚಂದ್ರಪ್ಪ, ಕೆಂಪರಾಜು, ರಾಜಣ್ಣ, ವೀರಕ್ಯಾತರಾಯ, ಶ್ರೀರಂಗಯ್ಯ, ಹನುಮಂತರಾಯಪ್ಪ, ಜುಂಜಣ್ಣ, ದಯಾನಂದ್, ಶಾಂತಮ್ಮ, ವೆಂಕಟಲಕ್ಷ್ಮಮ್ಮ, ಸಿದ್ದಗಂಗಯ್ಯ, ರಾಮಯ್ಯ, ಜಯರಾಮಯ್ಯ, ಕೊಂಡಪ್ಪ, ಸಿದ್ದರಾಜು, ಶ್ರೀನಿವಾಸ ಸೇರಿದಂತೆ ಇತರರು ಇದ್ದರು.
ಊಟ–ತಿಂಡಿ–ನಿದ್ರೇ ಎಲ್ಲವೂ ಇಲ್ಲೇ:
ಕಲ್ಲುಗಣಿಗಾರಿಕೆ ವಿರೋಧಿಸಿ ಮಿನಿ ವಿಧಾಸೌಧ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ರೈತರಿಗೆ ಊಟ–ತಿಂಡಿ ಮತ್ತು ನಿದ್ರೆಗೆ ಅಲ್ಲೇ ವ್ಯವಸ್ಥೆ ನಡೆದಿದೆ. ಟ್ರಾಕ್ಟರ್‍ಗಳನ್ನು ಹೊರಗಡೆ ನಿಲ್ಲಿಸಿ ಕಚೇರಿಗೆ ತೆರಳುವ ಮಾರ್ಗದ ಮೆಟ್ಟಿಲುಗಳ ಮೇಲೆಯೇ ರೈತರು ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ತಹಶೀಲ್ದಾರ್ ಮನವಿಗೆ ಜಗ್ಗದ ರೈತರು:
ಪ್ರತಿಭಟನೆ ವೇಳೆ ತಹಶೀಲ್ದಾರ್ ಮಂಜುನಾಥ ರೈತರ ಮನವೋಲಿಸುವ ಪ್ರಯತ್ನ ಮಾಡಿದರು. ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೋಳ್ಳಲು ನಮ್ಮ ಶಾಸಕರು ಹೇಳಿದ್ದಾರೆ ಎಂದರು ಸಹ ರೈತರು ಪಟ್ಟು ಹಿಡಿದಿದ್ದಾರೆ. ಶಾಸಕರು ನಮಗೇ ಭರವಸೆ ನಿಡುವ ತನಕ ಅಹೋರಾತ್ರಿ ಧರಣಿ ಕೈಬೀಡುವ ಪ್ರಶ್ನೆಯೇ ಇಲ್ಲ ಎಂದು ಧರಣಿ ಮುಂದುವರೆಸಿದ್ದಾರೆ.
ಹೈಕೋರ್ಟ್ ಆದೇಶದಂತೆ ಡ್ರೋನ್ ಸರ್ವೆಗೆ ಹೋದಾಗ ಚೀಲಗಾನಹಳ್ಳಿ ರೈತರಿಂದ ವಿರೋಧ ವ್ಯಕ್ತವಾಗಿದೆ. ಗಣಿಗಾರಿಕೆಗೆ ಗುರುತಿಸಿರುವ ಭೂಮಿಯ ಅಕ್ಕಪಕ್ಕ ದೇವಾಲಯ, ಕೆರೆಕಟ್ಟೆ, ಅರಣ್ಯ ಮತ್ತು ನಿರಾಶ್ರಿತರಿಗೆ ನಿವೇಶದ ಭೂಮಿಯಿದೆ. ಗಣಿಗಾರಿಕೆಗೆ ಅವಕಾಶ ನೀಡದಂತೆ ಗೃಹಸಚಿವ ಡಾ.ಜಿ.ಪರಮೇಶ್ವರ ಸಾಹೇಬ್ರ ಆದೇಶವು ಸಹ ನಮಗೇ ಇದೆ. ಪ್ರತಿಭಟನೆ ಕೈಬಿಡಲು ರೈತರಿಗೆ ಮನವಿ ಮಾಡಿದ್ದೇನೆ.
— ಮಂಜುನಾಥ ಕೆ. ತಹಶೀಲ್ದಾರ್. ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4