ಕುಣಿಗಲ್: ನನ್ನ ಗಂಡ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ, ತಲೆ ಬುರುಡೆಗೆ ಗಾಯವಾಗಿ ವೈದ್ಯರು ನಾಲ್ಕು ಹೊಲಿಗೆ ಹಾಕಿದ್ದಾರೆ, ಆದರೆ ನನಗೆ ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಗುತ್ತಿಲ್ಲ ಎಂದು ಮಹಿಳೆಯೊಬ್ಬರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಕಾಲಿಗೆ ಬಿದ್ದು ನ್ಯಾಯ ಕೇಳಿದ ಘಟನೆ ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು.
ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ, ಮಂಗಳವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಕುಣಿಗಲ್ ಬಿಬಿಎಂಪಿ ನೌಕರನ ಪತ್ನಿ ಸುಧಾ ಹಾಗೂ ಸಂತೆ ಮಾವತ್ತೂರು ಗ್ರಾಮದ ಸುಮಿತ್ರಾ ನಮಗೆ ನಮ್ಮ ಗಂಡಂದಿರು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಮಾರಣಾಂತಿಕ ಹಲ್ಲೆ ಮಾಡಿ ತಲೆ ಬುರುಡೆ ಗಾಯವಾಗಿ ಹಲವು ಬಾರಿ ವೈದ್ಯರು ಬುರುಡೆಗೆ ಹೊಲಿಗೆ ಹಾಕಿದ್ದಾರೆ. ನಾನು ಪೊಲೀಸ್ ಠಾಣೆಗೆ ದೂರು ನೀಡಿದರೆ ನನಗೆ ಪೊಲೀಸರು ನ್ಯಾಯ ಕೊಡುತ್ತಿಲ್ಲ. ನನ್ನ ಗಂಡನ ವಿರುದ್ಧ ಕ್ರಮಕೈಗೊಂಡಿಲ್ಲ. ನಾವು ಯಾರ ಬಳಿ ಹೋಗಿ ನ್ಯಾಯ ಕೇಳಬೇಕು ಎಂದು ಕಣ್ಣೀರು ಹಾಕಿದರು.
ಸಿಪಿಐ ವಿರುದ್ಧ ಎಸ್ಪಿಗೆ ದೂರು: ದೂರವಾಣಿ ಮೂಲಕ ಎಸ್ಪಿ ಕೆ.ವಿ.ಅಶೋಕ್ ಅವರನ್ನು ಸಂಪರ್ಕಿಸಿದ ನಾಗಲಕ್ಷ್ಮಿ, ಸುಧಾ ಎಂಬ ಮಹಿಳೆ ಕುಣಿಗಲ್ ಪೊಲೀಸ್ ಠಾಣೆಗೆ ನ್ಯಾಯ ಕೇಳಿ ದೂರು ಸಲ್ಲಿಸಿದರೆ, ಸರಿಯಾಗಿ ಪೊಲೀಸರು ಸ್ಪಂದಿಸಿಲ್ಲ. ಹಲ್ಲೆ ಮಾಡಿದವರನ್ನು ಬಂಧಿಸಿರುವುದಿಲ್ಲ ಹಾಗೂ ಅಟೆಂಪ್ಟ್ ಟು ಮರ್ಡರ್ ಕೇಸ್ ಹಾಕಿಲ್ಲ. ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಸಂತೆಮಾವತ್ತೂರು ಗ್ರಾಮದ ಕಸದ ಗಾಡಿ ಕೆಲಸದ ಸುಮಿತ್ರಾಳಿಗೆ ಆಕೆಯ ಪತಿ ಅರವಿಂದ್ ಎಂಬುವವನು ತಲೆಗೆ ಹಲ್ಲೆ ಮಾಡಿದ್ದಾನೆ. ವೈದ್ಯರು ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದಾರೆ. ಈ ಇಬ್ಬರು ಹೆಣ್ಣು ಮಕ್ಕಳಿಗೆ ಸ್ಥಳೀಯ ಪೊಲೀಸರು ಸ್ಪಂದಿಸದ ಕಾರಣ ನನ್ನ ಬಳಿ ಬಂದು ನೊಂದ ಮಹಿಳೆಯರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ, ಪೊಲೀಸ್ ಕಮಿಷನರ್‌ಗೆ ಪತ್ರ ಬರೆಯುವುದಾಗಿ ಎಸ್ಪಿಯವರಿಗೆ ತಿಳಿಸಿದರು.
ಸಿಎಂಗೆ ದೂರು ಎಚ್ಚರಿಕೆ: ಪ್ರಾಥಮಿಕ ಆರೋಗ್ಯ ಕೇಂದ್ರದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಕಳೆದ ಐದು ತಿಂಗಳಿಂದ ಪಿಎಫ್, ಇಎಸ್ ಐ ಕಟ್ಟಿಲ್ಲ ಎಂದು ಗುತ್ತಿಗೆ ನೌಕರರು ದೂರಿದಾಗ, ಆಕ್ರೋಶಗೊಂಡ ನಾಗಲಕ್ಷ್ಮಿ ಡಿಎಚ್‌ಒ ಡಾ.ಚಂದ್ರಶೇಖರ್‌ಗೆ ದೂರವಾಣಿ ಮೂಲಕ ಕೇವಲ 10 ಅಥವಾ 12 ಸಾವಿರಕ್ಕೆ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ ಸರಿಯಾಗಿ ಪಿಎಫ್ ಮತ್ತು ಇಎಸ್‌ಐ ಹಣ ಕಟ್ಟುವುದಿಲ್ಲ ಎಂದು ದೂರು ಬಂದಿದೆ.
ಸತ್ತ ಮೇಲೆ ನ್ಯಾಯ ಕೊಡುತ್ತೀರಾ? ಕುಣಿಗಲ್ ವೃತ್ತ ನಿರೀಕ್ಷಕ ಮಾದಪ್ಪ ನಾಯಕ್ ಅವರನ್ನು ನೆಲದ ಮೇಲೆ ಕೂರಿಸಿಕೊಂಡ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು, ಮಹಿಳೆಯರ ಮೇಲೆ ಅವರ ಗಂಡಂದಿರು ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಇದು ಅಟೆಂಪ್ಟ್ ಟು ಮರ್ಡರ್ ಕೇಸ್ ಗೆ ಬರುವುದಿಲ್ಲವೇ? ದೂರು ಕೊಟ್ಟ ತಕ್ಷಣ ಆರೋಪಿಗಳನ್ನು ಠಾಣೆಗೆ ಕರೆಸಿ ಕ್ರಮಕೈಗೊಂಡಿದ್ದರೆ ಇಷ್ಟೆಲ್ಲಾ ಅನಾಹುತ ಆಗುತ್ತಿತ್ತೆ? ಆ ಮಹಿಳೆಯರು ಸತ್ತ ಮೇಲೆ ನ್ಯಾಯ ಕೊಡುತ್ತೀರಾ ಎಂದು ಸಿಪಿಐಗೆ ತರಾಟೆ ತೆಗೆದುಕೊಂಡರು.
ಏನು ಕ್ರಮಕೈಗೊಂಡಿದ್ದೀರಿ? ಗುತ್ತಿಗೆ ಪಡೆಯುವ ವ್ಯಕ್ತಿಗಳು ಸರ್ಕಾರಿ ಮಂಜೂರು ತಂದ ಅನುದಾನ ನೀಡದಿದ್ದರೂ ನಾವು ನೌಕರರಿಗೆ ಸಂಬಳ ಕೊಡುತ್ತೇವೆ ಹಾಗೂ ಪಿಎಫ್ ಮತ್ತು ಇಎಸ್‌ಐ ಕಟ್ಟುತ್ತೇವೆ ಎಂದು ಬರೆದುಕೊಟ್ಟಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು. ಕೂಡಲೇ ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದರು.
ಅನಾಥ ಮಹಿಳೆಗೆ ಉತ್ತಮ ಚಿಕಿತ್ಸೆಗೆ ಸೂಚನೆ: ಆಸ್ಪತ್ರೆಯಲ್ಲಿ ದಾಖಲಾಗಿರುವ ತಾಲೂಕಿನ ಎಡಿಯೂರು ಗ್ರಾಮದ ಅಡಿಲಕ್ಷ್ಮಿ ಅವರ ಆರೋಗ್ಯವನ್ನು ಅಧ್ಯಕ್ಷೆ ನಾಗಲಕ್ಷ್ಮಿ ವಿಚಾರಿಸಿದರು. ನನಗೆ ತಂದೆ, ತಾಯಿ, ಮಕ್ಕಳು ಯಾರೂ ಇಲ್ಲ, ಗಂಡ ಬಿಟ್ಟು ಹೋಗಿದ್ದಾನೆ. ಆರೋಗ್ಯ ಸರಿಯಿಲ್ಲದೆ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಅಡಿಲಕ್ಷ್ಮಿ ತಿಳಿಸಿದರು. ಈಕೆಗೆ ಉತ್ತಮ ಚಿಕಿತ್ಸೆ ನೀಡಿ, ಆರೋಗ್ಯ ಸುಧಾರಣೆಯಾದ ಬಳಿಕ ಸಾಂತ್ವನ ಕೇಂದ್ರಕ್ಕೆ ಕಳಿಸಿಕೊಡಿ ಎಂದು ಸಿಡಿಸಿಪಿ ಕಮಲಾಗೆ ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


