ತುಮಕೂರು: ಜಿಲ್ಲಾ ತಾಲ್ಲೂಕು ಕಚೇರಿಯಲ್ಲಿ ಮಹತ್ವದ ಕಡತವೊಂದು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಇದಕ್ಕೆ ಕಾರಣರಾದ ನೌಕರರು ಹಾಗೂ ಸಿಬ್ಬಂದಿ ವಿರುದ್ಧ ತಹಶೀಲ್ದಾರ್ ರಾಜೇಶ್ವರಿ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೆಬ್ಬೂರು ಹೋಬಳಿ ಜೋಡಿ ಕಲ್ಲೆರೆ ಗ್ರಾಮದ ಸರ್ವೆ ನಂಬರ್ 60ಕ್ಕೆ ಸಂಬಂಧಿಸಿದ ದಾಖಲೆಗಳು ತಾಲ್ಲೂಕು ಕಚೇರಿಯಿಂದ ಕಳುವಾಗಿವೆ. ಈ ಸ್ವತ್ತಿಗೆ ಸಂಬಂಧಿಸಿದಂತೆ ಶ್ರೀನಿವಾಸ್ ಕಲ್ಲೆರೆ ಎಂಬುವವರು ದಾಖಲಾತಿಗಾಗಿ ಮನವಿ ಮಾಡಿದ್ದರು. ಆದರೆ, ದಾಖಲೆಗಳು ಲಭ್ಯವಿಲ್ಲವೆಂದು ತಹಶೀಲ್ದಾರ್ ನೀಡಿದ್ದ ಹಿಂಬರಹದ ವಿರುದ್ಧ ಶ್ರೀನಿವಾಸ್ ಅವರು ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಈ ಮನವಿಯನ್ನು ಪುರಸ್ಕರಿಸಿದ ಮಾಹಿತಿ ಆಯೋಗವು ತಹಶೀಲ್ದಾರ್ ನೀಡಿದ್ದ ಹಿಂಬರಹವನ್ನು ತಿರಸ್ಕರಿಸಿದೆ. ಅಷ್ಟೇ ಅಲ್ಲದೆ, ಒಂದು ವೇಳೆ ಕಡತ ಲಭ್ಯವಿಲ್ಲದಿದ್ದಲ್ಲಿ ಅದಕ್ಕೆ ಸೂಕ್ತ ಕಾರಣಗಳನ್ನು ನೀಡಿ, ಮೇ 5ರಂದು ಪ್ರಮಾಣ ಪತ್ರದೊಂದಿಗೆ ವಿಚಾರಣೆಗೆ ಹಾಜರಾಗಬೇಕೆಂದು ತಹಸೀಲ್ದಾರ್‌ಗೆ ಕಟ್ಟುನಿಟ್ಟಿನ ಆದೇಶ ನೀಡಿತ್ತು.
ಮಾಹಿತಿ ಆಯೋಗದ ಆದೇಶದ ಬೆನ್ನಲ್ಲೇ ಎಚ್ಚೆತ್ತುಕೊಂಡ ತಹಶೀಲ್ದಾರ್ ರಾಜೇಶ್ವರಿ ಅವರು, ಕಡತ ನಾಪತ್ತೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಶ್ರೀನಿವಾಸ್ ಅವರು ಕೋರಿದ್ದ ದೊಡ್ಡಶಾನಯ್ಯ ಅವರ ಸಹಿವುಳ್ಳ ಮೂಲ ಅರ್ಜಿ, ವಂಶವೃಕ್ಷ, ಮರಣ ಪ್ರಮಾಣ ಪತ್ರ, ಒಪ್ಪಿಗೆ ಹೇಳಿಕೆ ದಾಖಲೆ ಹಾಗೂ ಆರ್ ಟಿಸಿ ಎಂಆರ್ 15/95–96ರ ಕಡತಗಳು ನಾಪತ್ತೆಯಾಗಿವೆ.
ಈ ಪ್ರಮುಖ ದಾಖಲೆಗಳ ಅಲಭ್ಯತೆಗೆ ನೇರ ಕಾರಣರಾಗಿರುವ ನೌಕರರು ಅಥವಾ ಅಧಿಕಾರಿಗಳ ವಿರುದ್ಧ ‘ದಿ ಕರ್ನಾಟಕ ಸ್ಟೇಟ್ ಪಬ್ಲಿಕ್ ರೆಕಾರ್ಡ್ ಆ್ಯಕ್ಟ್ 2010’ ಹಾಗೂ ಕಾಯ್ದೆಯ ನಿಯಮಾವಳಿ 2013ರ ಅನ್ವಯ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ತಹಶೀಲ್ದಾರ್ ತಮ್ಮ ದೂರಿನಲ್ಲಿ ಕೋರಿದ್ದಾರೆ. ಈ ಘಟನೆಯು ಸರ್ಕಾರಿ ಕಚೇರಿಗಳಲ್ಲಿ ದಾಖಲೆಗಳ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


