ಬೆಂಗಳೂರು: ಕನ್ನಡ ಚಿತ್ರರಂಗದ ನಟ ಮಯೂರ್ ಪಟೇಲ್ ಅವರು ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿ ನಗರದಲ್ಲಿ ಸರಣಿ ಅಪಘಾತ ಎಸಗಿದ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ಈ ಸಂಬಂಧ ಹಲಸೂರು ಸಂಚಾರಿ ಪೊಲೀಸರು ನಟನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ: ಹಿರಿಯ ನಟ ಮದನ್ ಪಟೇಲ್ ಅವರ ಪುತ್ರ ಮಯೂರ್ ಪಟೇಲ್ ಅವರು ಬುಧವಾರ ರಾತ್ರಿ ತಮ್ಮ ಟೊಯೊಟಾ ಫಾರ್ಚೂನರ್ ಕಾರಿನಲ್ಲಿ ದೊಮ್ಮಲೂರು ರಸ್ತೆಯಾಗಿ ಸಂಚರಿಸುತ್ತಿದ್ದರು. ಈ ವೇಳೆ ಅತಿಯಾದ ವೇಗ ಮತ್ತು ಮದ್ಯದ ಅಮಲಿನಲ್ಲಿದ್ದ ಅವರು ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡು, ರಸ್ತೆ ಬದಿ ನಿಂತಿದ್ದ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ.
ಈ ಸರಣಿ ಅಪಘಾತದಲ್ಲಿ ಶ್ರೀನಿವಾಸ್ ಮತ್ತು ಅಭಿಷೇಕ್ ಎಂಬುವವರಿಗೆ ಸೇರಿದ ವಾಹನಗಳು ಸೇರಿದಂತೆ ಒಂದು ಸರ್ಕಾರಿ ವಾಹನಕ್ಕೂ ಭಾರೀ ಹಾನಿಯಾಗಿದೆ. ಅಪಘಾತದ ತೀವ್ರತೆಗೆ ಸ್ಥಳೀಯರು ಮತ್ತು ಪಾದಚಾರಿಗಳು ಆತಂಕಗೊಂಡಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಗಸ್ತು ಪಡೆಯು ನಟ ಮಯೂರ್ ಪಟೇಲ್ ಅವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದೆ. ಪರೀಕ್ಷೆಯಲ್ಲಿ ಅವರು ಕಾನೂನು ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಸಂತ್ರಸ್ತ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಪೊಲೀಸರು ಅಜಾಗರೂಕ ಚಾಲನೆ ಮತ್ತು ಮದ್ಯಪಾನ ಮಾಡಿ ಚಾಲನೆ ಮಾಡಿದ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದಾರೆ.
ತನಿಖೆಯ ವೇಳೆ ನಟ ಚಲಾಯಿಸುತ್ತಿದ್ದ ಐಷಾರಾಮಿ ಎಸ್ ಯುವಿ ಕಾರಿಗೆ ವಿಮೆ (Insurance) ಇಲ್ಲದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪೊಲೀಸರು ಅವರ ವಾಹನವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ವೈರಲ್ ವಿಡಿಯೋ: ಅಪಘಾತದ ಬಳಿಕ ನಟ ಕಾರಿನಿಂದ ಇಳಿದು ಜನರೊಂದಿಗೆ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅವರು, “ಎಷ್ಟೇ ನಷ್ಟವಾಗಿದ್ದರೂ ನಾನು ಅದನ್ನು ಸರಿಪಡಿಸಿಕೊಡುತ್ತೇನೆ” ಎಂದು ಹೇಳುತ್ತಿರುವುದು ಕಂಡುಬಂದಿದೆ.
‘ಉಡೀಸ್’, ‘ಮಣಿ’, ‘ಗುನ್ನಾ’ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಮಯೂರ್ ಪಟೇಲ್, ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


