ಒಮ್ಮೆ ಏನಾಯಿತೆಂದರೆ, ಒಬ್ಬ ಸನ್ಯಾಸಿ ಜೀವನದಲ್ಲಿ ಸಾಕಷ್ಟು ನೊಂದು ಬೆಂದು ಬೇಸತ್ತು ಹೋಗಿದ್ದನು. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದನು. ಅವನಿಗೆ ತನ್ನ ಬಂಧು ಬಾಂದವರು ಯಾರೆಂಬುದೇ ಗೊತ್ತಿರಲಿಲ್ಲ. ಆರಕ್ಕೂ ಏರದೇ ಮೂರಕ್ಕೂ ಇಳಿಯದೇ ನೆಲೆ ಇಲ್ಲದೇ ಎಲ್ಲೆಂದರಲ್ಲಿ ಕುಳಿತು ಭಿಕ್ಷಾ ಊಟ ಮಾಡುತ್ತಿದ್ದ ನೆಲೆಯೇ ನೆಲೆಯಾಗಿತ್ತು. ಹೀಗಿರುವಾಗ ಒಂದು ದಿನ ರಾತ್ರಿ ಪಾಳುಬಿದ್ದ ದೇವಸ್ಥಾನದ ಜಗುಲಿ ಮೇಲೆ ಮಲಗಿಕೊಂಡು, ಎರಡೂ ಕೈ ತಲೆಗೆ ಒರಗಿಕೊಂಡು, ನಾನು ಇನ್ನು ಜೀವನದಲ್ಲಿ ಏನನ್ನೂ ಸಾಧಿಸಲಿಲ್ಲ, ಇನ್ನು ಭಿಕ್ಷಾಟನೆಯಲ್ಲಿಯೇ ಬದುಕುತ್ತಿದ್ದೇನೆ, ಬೇರೆ ಸಾಧು ಸತ್ಪರುಷರು ಹೆಸರು, ಹಣ ಮಾಡುತ್ತಾರೆ ಅದು ಅವರು ಪಡೆದಿರುವ ಅದೃಷ್ಟ ಆಗಿರುತ್ತದೆ, ನನಗೆ ಇಷ್ಟು ವರುಷವಾದರೂ ಅದೃಷ್ಟ ಬಂದಿಲ್ಲವೆಂದರೆ ನನ್ನ ಹಣೆ ಬರಹದ ಪಾಡು ಇಷ್ಟೇ ಆಗಿರುತ್ತದೆ ಎಂದು ಯೋಚಿಸಿ ಇನ್ನು ನಾನು ಬದುಕಿರಬಾರದು ಯಾವುದಾದರೂ ಕೆರೆಗೆ ಬಿದ್ದು ಸಾಯಬೇಕು, ಎಂದು ಯೋಚಿಸಿ ಸೂರ್ಯೋದಯವಾಗುತ್ತಿದ್ದಂತೆ ಅತ್ಯಂತ ಕಠೋರ ಮನಸ್ಸಿನಿಂದ ಕಾಡಿನ ಒಂದು ಕೆರೆಯ ದಂಡೆಯ ಮೇಲೆ ನಡೆಯುತ್ತಾ, ಕೆರೆಗೆ ಹಾರಿ ಬಿಡೋಣ ಎಂದು ಹಾರಲು ಮುಂದಾದ.
ಈ ವೇಳೆ ಹಿಂದಿನಿಂದ ವತ್ಸ ಎಂಬ ಧ್ವನಿಯು ಕೇಳಿಸುತ್ತದೆ, ಹಿಂತಿರುಗಿ ನೋಡಿದಾಗ ಅದು ಒಬ್ಬ ಸಂತನದ್ದಾಗಿರುತ್ತಾರೆ, ಅವರು ಸನ್ಯಾಸಿಯನ್ನು ಕುರಿತು ಏಕೆ ಹೀಗೆ ಸಾಯುವ ತೀರ್ಮಾನ ಮಾಡಿದ್ದೀಯ ಎಂದು ಕೇಳಿದಾಗ, ಸನ್ಯಾಸಿ ತನ್ನ ಜೀವನವನ್ನೆಲ್ಲಾ ವಿವರಿಸುತ್ತಾನೆ. ಆಗ ಸಂತರು ನೋಡು ಇದು ದೇವರ ನಿನಗೆ ಕೊಟ್ಟ ಅಂತಿಮ ಪರೀಕ್ಷೆಯಾಗಿತ್ತು, ನಿನ್ನ ಸಾವು ಅವನಿಗೆ ಇಷ್ಟವಿಲ್ಲ, ಅದಕ್ಕಾಗಿ ದೇವರು ನಿನ್ನ ಸಾವನ್ನು ತಡೆಯಲು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ ಎಂದಾಗ ಸನ್ಯಾಸಿಗೆ ಕಡೆಗೂ ದೇವರು ನನಗೆ ಒಲಿದು ಬಿಟ್ಟನಲ್ಲಾ ಎಂದು ಖುಷಿಪಡುತ್ತಾ ಸಂತರಿಗೆ ನಮಸ್ಕರಿಸಿ ಸಂತರೇ ಈಗ ನಾನೇನು ಮಾಡಬೇಕು ಎಂದು ಕೇಳಿದ. ಈ ವೇಳೆ ಸಂತರು ನೋಡು ವತ್ಸ ನಾನು ನಿನ್ನ ಹಾಗೆ ಜೀವನದಲ್ಲಿ ಬೇಸತ್ತು ಸಾಯಲು ಹೋಗಿದ್ದೆ ಆಗ ಒಬ್ಬ ಗುರುಗಳು ನನ್ನ ಸಾವನ್ನು ತಡೆದು ನನಗೆ ಉಪದೇಶಿಸಿ, ದೇವರನ್ನು ಕುರಿತು ತಪಸ್ಸು ಮಾಡು ನಿನಗೆ ದೇವರು ಒಲಿದು ಎಲ್ಲಾ ಒಳ್ಳೆಯದು ಮಾಡುತ್ತಾನೆ ಎಂದರು. ಆಗ ನಾನು ಹಲವು ವರುಷ ತಪಸ್ಸು ಮಾಡಿದಾಗ ದೇವರು ನನಗೆ ಒಲಿದು ಈಗ ಹಣ ಸಂಪತ್ತು ಹೆಸರು ಕೀರ್ತಿ ಎಲ್ಲಾ ಕೊಟ್ಟಿದ್ದಾನೆ, ನೀನು ಕೂಡು ದೇವರನ್ನು ಕುರಿತು ತಪಸ್ಸು ಮಾಡು, ನಿನಗೆ ಎಲ್ಲಾ ಒಳ್ಳೆಯದು ಆಗುತ್ತದೆ, ಆದರೆ ಒಂದು ಮಾತು ನೆನಪಿನಲ್ಲಿ ಇಟ್ಟುಕೋ ತಪಸ್ಸು ಮಾಡುವಾಗ ತಪಸ್ಸಿಗೆ ಭಂಗ ತರುವ ಯಾವುದೇ ಸನ್ನಿವೇಷ ಬಂದರೂ ಮನಸ್ಸು ವಿಕಲ್ಪನಾಗಿ ತಪಸ್ಸು ಅರ್ಧಕ್ಕೇ ನಿಲ್ಲಿಸಬೇಡ ಆಯಿತಾ ಎಂದಾಗ ಸನ್ಯಾಸಿ ಹಾಗೇ ಆಗಲೆಂದು ಸಂತರಿಗೆ ನಮಸ್ಕರಿಸಿ ಕಾಡಿನ ಮಧ್ಯದ ಒಂದು ಅರಳೀಮರದ ಕೆಳಗೆ ಒಂದು ವಸ್ತ್ರ ಹಾಸಿ ದೇವರಿಗೆ ಕೈಮುಗಿದು ತಪಸ್ಸಿಗೆ ಕುಳಿತನು.
ಹಸಿವು, ನೀರು, ನಿದ್ರೆ ಎಲ್ಲ ತಡೆದುಕೊಂಡು ತಪಸ್ಸು ಮಾಡುವಾಗ ಕೈ ಕಾಲುಗಳಿಗೆ ಇರುವೆ ಕಚ್ಚಿದವು, ಇದು ಪರೀಕ್ಷೆಯೇ ಇರಬೇಕು ಎಂದು ಅಂದುಕೊಂಡು ವಿಚಲಿತನಾಗದೇ ತಪಸ್ಸು ಮುಂದುವರೆಸಿದನು. ನಂತರ ದುಂಬಿಗಳೂ ಝೇಂಕರಿಸುತ್ತಾ ಬಂದು ಕೆನ್ನೆ, ಕಿವಿಗೆ ಕಚ್ಚಿದವು ಇವೆಲ್ಲವೂ ಪರೀಕ್ಷೆ ಎಂದು ಅಲುಗಾಡದೇ ತಪಸ್ಸು ಮುಂದುವರೆಸಿದನು. ಆದರೆ ದುರಾದೃಷ್ಟವಷಾತ್ ಒಂದು ಕರಿನಾಗರದ ಹಾವು ಹರಿದುಕೊಂಡು ಬಂದು ಅವನ ಕಾಲಿಗೆ ಕಚ್ಚಿತು, ಆದರೆ ಈ ಬಾರಿ ಅವನು ವಿಚಲಿತನಾಗಿ ಕಣ್ಣು ತೆರೆದು ನೋಡಿದಾಗ ಕಚ್ಚಿದ ಹಾವು ಮುಂದೆ ಹರಿದು ಹೋಗುತ್ತಿದ್ದಿತು ನಂತರ ಅಯ್ಯಯ್ಯೋ ಕಾಪಾಡಿ ಎಂದು ಅಲ್ಲಿಂದ ಎದ್ದು ಓಡಿ ಬರುತ್ತಿರುವಾಗಲೇ ಮರ ಕಡಿಯುವವ ಒಬ್ಬ ಎದುರಿಗೆ ಬರುತ್ತಿದ್ದ ಅವನ ಹತ್ತಿರ ಹೋಗಿ ನನಗೆ ಹಾವು ಕಚ್ಚಿದೆ ನನ್ನನ್ನು ಕಾಪಾಡಿ ಎಂದಾಗ ಆತ ಒಂದು ಹಸಿರು ಬಳ್ಳಿಯನ್ನು ಕತ್ತಿರಿಸಿ ತಂದು ಕಚ್ಚಿದ ಮೇಲ್ಬಾಗಕ್ಕೆ ಬಿಗಿಯಾಗಿ ಕಟ್ಟಿದನು ನಂತರ ನೆಲಕ್ಕೊರಗಿದ್ದ ಸನ್ಯಾಸಿಯನ್ನು ಕುರಿತು ಇದು ಹೇಗಾಯಿತು ಎಂದಾಗ, ಸನ್ಯಾಸಿ ನಡೆದ ವೃತ್ತಾಂತ ಎಲ್ಲ ವಿವರಿಸಿದ. ಆಗ ಮರ ಕಡೆಯುವವ ಹೇಳಿದ ನೋಡಿ ನೀವು ಸ್ವಯಂ ವಿದ್ಯಾವಂತರು, ಬುದ್ಧಿವಂತರು, ಜ್ಞಾನಿಗಳು ಹೀಗಿದ್ದೂ, ಇನ್ನೊಬ್ಬರು ನಿಮ್ಮ ಭವಿಷ್ಯ ಹೇಗೆ ಹೇಳುತ್ತಾರೆ, ಅವರ ಮಾತನ್ನು ನೀವು ಏಕೆ ಕೇಳಿದಿರಿ? ಅವರಿಗೆ ಆದಂತೆ ನಿಮಗೂ ಆಗಬೇಕೆಂದೇನಿಲ್ಲ, ಅವರ ಬದುಕು ಅವರದು ನಿಮ್ಮ ಬದುಕು ನಿಮ್ಮದು, ದೇವರಿಗೆ ತಪಸ್ಸು ಮಾಡಿ ಮೆಚ್ಚಿಸಬೇಕೆಂದೇನಿಲ್ಲ, ಒಳ್ಳೆಯ ಕೆಲಸ ಮಾಡಿ ಮೆಚ್ಚಿಸಬಹುದು, ದೇವರು ಇರುವೆ, ದುಂಬಿ ರೂಪದಲ್ಲಿ ಬಂದು ನಿಮಗೆ ಮುಂಬರುವ ದುರ್ಗತಿ ಬಗ್ಗೆ ಎಚ್ಚರಿಕೆ ಕೊಟ್ಟ ಆದರೆ ನೀವು ನಿರ್ಲಕ್ಷಿಸಿದಿರಿ ಈಗ ನಿಮ್ಮ ಸಾವನ್ನು ದೇವರಿಂದಲೂ ತಡೆಯಲು ಸಾಧ್ಯವಿಲ್ಲ ಎಂದಾಗ ಸನ್ಯಾಸಿ ಹೌದು, ನಿಜ ಈ ಅನಕ್ಷರಸ್ಥನಿಗಿರುವ ಜ್ಞಾನ ನನಗೆ ಇಲ್ಲವಲ್ಲ ಎಂದು ನೊಂದು ಪ್ರಾಣ ಬಿಟ್ಟ.
ನೀತಿ: ಕೆಲವೊಮ್ಮೆ ನಮ್ಮ ಬದುಕನ್ನು ನಾವೇ ಯೋಚಿಸಿ, ನಿರ್ಧರಿಸಿ ಕಟ್ಟಿಕೊಳ್ಳಬೇಕಾಗುತ್ತದೆ ಬೇರೆಯವರ ಮಾರ್ಗದರ್ಶನ ನಮಗೆ ಸಂಚಕಾರ ತರಬಹುದು.

ಸಂಪಾದಕರ ನುಡಿ
‘ಮೂರ್ಖ ಬಲಿದಾನ’ ಕಥೆ ಮಾನವನ ಬದುಕಿನ ತೀರ್ಮಾನಶಕ್ತಿಯನ್ನು ಗಂಭೀರವಾಗಿ ಪ್ರಶ್ನಿಸುತ್ತದೆ. ಜೀವನದ ಸಂಕಟದ ಹೊತ್ತಿನಲ್ಲಿ ನಾವು ನಮ್ಮ ಬುದ್ಧಿ, ಅನುಭವ ಮತ್ತು ಅಂತರಾತ್ಮದ ಧ್ವನಿಯನ್ನು ಮರೆತು, ಮತ್ತೊಬ್ಬರ ಮಾತನ್ನೇ ಅಂತಿಮ ಸತ್ಯವೆಂದು ಒಪ್ಪಿಕೊಳ್ಳುವ ಪ್ರವೃತ್ತಿಯೇ ಇಲ್ಲಿ ಸನ್ಯಾಸಿಯ ದುರಂತಕ್ಕೆ ಕಾರಣವಾಗುತ್ತದೆ. ದೇವರ ಹೆಸರಿನಲ್ಲಿ ನಡೆದ ತಪಸ್ಸಿಗಿಂತಲೂ, ವಿವೇಕದ ಕೊರತೆಯೇ ಅವನ ಪ್ರಾಣ ಹರಣಕ್ಕೆ ದಾರಿ ಮಾಡಿಕೊಟ್ಟಿತು.
ಈ ಕಥೆ ಒಂದು ಸ್ಪಷ್ಟ ಸಂದೇಶ ನೀಡುತ್ತದೆ–ಪ್ರತಿಯೊಬ್ಬರ ಬದುಕು ವಿಭಿನ್ನ, ಅವರ ಹಾದಿಯೂ ವಿಭಿನ್ನ. ಒಬ್ಬರಿಗೆ ಫಲಿಸಿದ ಮಾರ್ಗವೇ ಎಲ್ಲರಿಗೂ ಫಲಿಸುತ್ತದೆ ಎನ್ನುವ ಭ್ರಮೆಯೇ “ಮೂರ್ಖ ಬಲಿದಾನ”. ಬದುಕನ್ನು ಕಟ್ಟಿಕೊಳ್ಳಲು ಭಕ್ತಿಗಿಂತ ಬುದ್ಧಿ, ಶ್ರದ್ಧೆಯಿಗಿಂತ ಸ್ವವಿಮರ್ಶೆ, ಮಾರ್ಗದರ್ಶನಕ್ಕಿಂತ ಸ್ವತಂತ್ರ ಚಿಂತನೆ ಅಗತ್ಯ.
ಇಂದಿನ ಸಮಾಜದಲ್ಲಿಯೂ ಇಂತಹ ಅಂಧ ಅನುಕರಣೆಯ ಉದಾಹರಣೆಗಳು ಹೆಚ್ಚುತ್ತಿವೆ. ಆದ್ದರಿಂದ ಈ ಕಥೆ ಕೇವಲ ಕಥೆಯಲ್ಲ; ಇದು ಎಚ್ಚರಿಕೆಯ ಘಂಟೆ.
— ಸಂಪಾದಕರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


