ತುಮಕೂರು: ಬರಪೀಡಿತ ಬಯಲು ಸೀಮೆಯ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಇನ್ನಿತರ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ಅಂತರ್ಜಲ ವೃದ್ಧಿಗಾಗಿ ರೂಪಿಸಿರುವ ಎತ್ತಿನಹೊಳೆ ಯೋಜನೆಗೆ ಅಡ್ಡಿಯಾಗಿದ್ದ ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಏ.1.2026ರಂದು ಸಿಕ್ಕಿದ್ದು, ಬಾಕಿ ಇರುವ 6 ಕಿ.ಮೀ. ಟನಲ್ ಕಾಮಗಾರಿ ಮುಗಿಸಿ, 2026ರ ಅಕ್ಟೋಬರ್ ಒಳಗೆ ತುಮಕೂರು ಜಿಲ್ಲೆಗೆ ನೀರು ಹರಿಸಲು ಪ್ರಯತ್ನ ನಡೆಸುತ್ತಿರುವುದಾಗಿ ವಿಶ್ವೇಶ್ವರಯ್ಯ ಜಲ ಅಭಿವೃದ್ಧಿ ನಿಗಮದ ಅಧಿಕಾರಿ ಚೀಫ್ ಇಂಜಿನಿಯರ್ ಆನಂದ್ ಹೆಚ್.ಎಸ್. ತಿಳಿಸಿದ್ದಾರೆ.
ನಗರದ ವಿಶ್ವೇಶ್ವರಯ್ಯ ಜಲ ಅಭಿವೃದ್ಧಿ ನಿಗಮದ ಎತ್ತಿನಹೊಳೆ ಯೋಜನಾ ಕಚೇರಿಯಲ್ಲಿ ಹಾಲಪ್ಪ ಪ್ರತಿಷ್ಠಾನದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪರಿಸರ ಕ್ಲಿಯರೆನ್ಸ್ ಪಡೆಯಲು ಸಹಕರಿಸಿದ ಅಧಿಕಾರಿಗಳಿಗೆ ಅಭಿನಂದನೆ ಹಾಗೂ ಯೋಜನೆಗೆ ಸಂಬಂಧಿಸಿದ ಮಾಹಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 262 ಕಿ.ಮೀ. ನಾಲಾ ಕಾಮಗಾರಿಯಲ್ಲಿ 221 ಕಿ.ಮೀ. ಮುಕ್ತಾಯಗೊಂಡಿದೆ. 20 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಹತ್ತು ಕಿ.ಮೀ. ಅರಣ್ಯ ಕಾಮಗಾರಿಯಲ್ಲಿ 6 ಕಿ.ಮೀ. ಬಾಕಿ ಇದ್ದು, ಈ ಕಾಮಗಾರಿ ಮುಗಿದರೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದರು.
ಮೊದಲು ಕಾಮಗಾರಿ ಆರಂಭದಲ್ಲಿ ಈಗಾಗಲೇ ನಾವು ಕೆಲಸ ಮಾಡಿರುವ ಭೂಮಿ ಅರಣ್ಯ ಇಲಾಖೆಗೆ ಸೇರಿದೆಯೋ ಅಥವಾ ಕಂದಾಯ ಇಲಾಖೆಯದ್ದೋ ಎಂಬ ಗೊಂದಲ ಎರಡು ಇಲಾಖೆಗಳಲ್ಲಿ ಇತ್ತು. ಆದರೆ ನಾವೇ ಖುದ್ದಾಗಿ ಪರಿಶೀಲಿಸಿದಾಗ ವಾಸ್ತವ ತಿಳಿದಿದೆ. ಹಾಗಾಗಿ ಈಗಾಗಲೇ ಬಳಕೆ ಮಾಡಿದ ಅರಣ್ಯ ಭೂಮಿಗೆ ಹೆಚ್ಚುವರಿ ಮೊತ್ತವಾಗಿ 425 ಕೋಟಿ ಭರಿಸಬೇಕಾಗಿದೆ. ಇದಕ್ಕೆ ಈಗಾಗಲೇ ರಾಜ್ಯ ಸರ್ಕಾರ ಮತ್ತು ಜಲಸಂಪನ್ಮೂಲ ಇಲಾಖೆ ಅನುಮತಿ ನೀಡಿದೆ. ಅರಣ್ಯ ಭೂಮಿಗೆ ಬದಲಾಗಿ ಪರ್ಯಾಯ ಭೂಮಿ ನೀಡಲು ಸೂಚಿಸಿದ್ದು, ಇದಕ್ಕೂ ಕೂಡ ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ. ಅರಣ್ಯ ಭೂಮಿಯಲ್ಲಿ ಟನಲ್ ಮೂಲಕ ನೀರು ಹರಿಸಲು ಅನುಮೋದನೆ ದೊರೆತಿದ್ದು, ರಾಜ್ಯ ಸರ್ಕಾರದ ಡಿಮ್ಯಾಂಡ್ ನೋಟಿಸ್‌ಗೆ ಈ ಏಪ್ರಿಲ್ ಅಂತ್ಯದೊಳಗೆ ಒಪ್ಪಿಗೆ ದೊರೆತರೆ ಸಮರೋಪಾದಿಯಲ್ಲಿ ಕಾಮಗಾರಿ ನಡೆಸಿ, 2026ರ ಅಕ್ಟೋಬರ್ ತುಮಕೂರು ಜಿಲ್ಲೆಗೆ, ಹಾಗೂ 2027 ಅಕ್ಟೋಬರ್ ವೇಳೆಗೆ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದರು.
ಎತ್ತಿನಹೊಳೆ ಯೋಜನೆಯಿಂದ 15,029 ಟಿ.ಎಂ.ಸಿ ಕುಡಿಯುವ ನೀರಿಗೆ ಮತ್ತು 8967 ಟಿ.ಎಂ.ಸಿ ನೀರನ್ನು ಅಂತರ್ಜಲ ವೃದ್ಧಿಗೆ ಕೆರೆ ತುಂಬಿಸಲು ನಿಗದಿಪಡಿಸಲಾಗಿದೆ.
ನನೆಗುದಿಗೆ ಬಿದ್ದಿದ್ದ ಎತ್ತಿನಹೊಳೆ ಯೋಜನೆ ಚುರುಕುಗೊಳ್ಳಲು ಜಿಲ್ಲೆಯ ಎಲ್ಲಾ ತಾಲೂಕುಗಳ ರೈತರು, ತಾಯಂದಿರ ಹೋರಾಟದ ಜೊತೆಗೆ, ಅಧಿಕಾರಿಗಳ ಶ್ರಮವೂ ಇದೆ. ಕೇಂದ್ರ ಸರ್ಕಾರದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡಿ, ಪರ್ಯಾಯ ಜಾಗದ ಜೊತೆಗೆ, ನೈಜ ಚಿತ್ರಣ ನೀಡಿ, ಯೋಜನೆಗೆ ಇದ್ದ ಅಡ್ಡಿ, ಆತಂಕ ನಿವಾರಿಸುವಲ್ಲಿ ಶ್ರಮ ವಹಿಸಿದ್ದಾರೆ.
— ಮುರುಳೀಧರ ಹಾಲಪ್ಪ
ಮಾಜಿ ಶಾಸಕ ಎಸ್.ಷಫಿ ಅಹಮದ್ ಮಾತನಾಡಿ, 12 ವರ್ಷಗಳ ಹಿಂದೆ ಆರಂಭವಾದ ಯೋಜನೆ ಇನ್ನೂ ಪೂರ್ಣಗೊಳ್ಳದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ನಮ್ಮ ಭಾಗಕ್ಕೆ ಈ ಯೋಜನೆಯಿಂದ ಏನು ಪ್ರಯೋಜನ ಎಂಬ ಕುತೂಹಲ ಜನಗಳಲ್ಲಿದೆ. ಹಾಗಾಗಿ ಜನರಿಗೆ ಸಮರ್ಪಕ ಮಾಹಿತಿಯ ಜೊತೆಗೆ, ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕೋರಿದರು.
ಮಾಜಿ ಶಾಸಕ ಗಂಗಹನುಮಯ್ಯ ಮಾತನಾಡಿ, ಎತ್ತಿನಹೊಳೆ ಯೋಜನೆ ಮಳೆಗಾಲದಲ್ಲಿ ಹರಿದು ಸಮುದ್ರ ಪಾಲಾಗುವ ನೀರನ್ನು ಬರಪೀಡಿತ ಪ್ರದೇಶಗಳಿಗೆ ಹರಿಸುವ ಯೋಜನೆಯಾಗಿದೆ. ಹಾಗಾಗಿ 25 ಟಿ.ಎಂ.ಸಿ ನೀರು ಸಂಗ್ರಹಿಸಲು ಅಗತ್ಯವಿರುವ ಬಫರ್ ಡ್ಯಾಂ ನಿರ್ಮಾಣಕ್ಕೆ ಒತ್ತು ನೀಡುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಎತ್ತಿನಹೊಳೆ ಯೋಜನೆಯ ಉಪ ಮುಖ್ಯ ಇಂಜಿನಿಯರ್ ಪರಮೇಶ್ವರಪ್ಪ, ಕಾರ್ಯಪಾಲಕ ಅಭಿಯಂತರ ಮುರುಳೀಧರ್, ಮುಖಂಡರಾದ ಎ.ಗೋವಿಂದರಾಜು, ಚಿಕ್ಕನಾಯಕನಹಳ್ಳಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಪ್ರಸನ್ನ ಕುಮಾರ್, ನಂಜುಂಡಪ್ಪ, ಲೋಕೇಶ್, ಗಿರೀಶ್, ಕೆಂಚಮಾರಯ್ಯ, ನಯಾಜ್, ರೈತ ಸಂಘದ ರಾಜಪ್ಪ ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


