ತಿಪಟೂರು: ನಗರದಲ್ಲಿ ನಡೆದ 96ನೇ ವರ್ಷದ ಸತ್ಯ ಗಣಪತಿ ಮಹೋತ್ಸವ ಹಾಗೂ ಕಲ್ಪೋತ್ಸವ ಕಾರ್ಯಕ್ರವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಿದ್ದರು. ಕಳೆದ ಐದು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನ ಆಗಮಿಸಿದ್ದರು. ಮಹೋತ್ಸವದ ಮೆರವಣಿಗೆ, ಧಾರ್ಮಿಕ ಕಾರ್ಯಕ್ರಮಗಳು, ಮನರಂಜನಾ ಹಾಗೂ ಅನ್ನಸಂತರ್ಪಣೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಹೋತ್ಸವದ ಸಂದರ್ಭದಲ್ಲಿ ನಗರದಾದ್ಯಂತ ಅನ್ನಪ್ರಸಾದ ವಿತರಣೆ, ಆಟಿಕೆ ಮತ್ತು ಭಕ್ತಸಾಮಗ್ರಿಗಳ ಖರೀದಿ ಜೋರಾಗಿದ್ದು, ಅದರ ಪರಿಣಾಮವಾಗಿ ರಸ್ತೆಗಳಲ್ಲಿ ಬಿಸಾಡಿದ ಪ್ಲಾಸ್ಟಿಕ್ ತಟ್ಟೆಗಳು, ಆಟಿಕೆಗಳ ಪ್ಲಾಸ್ಟಿಕ್ ಕವರ್‌ಗಳು, ಮಸುಕಿದ ಹೂವಿನ ಹಾರಗಳು, ಹರಿದುಬಿದ್ದ ಪ್ಲೆಕ್ಸ್ ಬೋರ್ಡ್‌ಗಳು ಮತ್ತು ಇತರೆ ಕಸದ ರಾಶಿ ಕಂಡುಬಂದಿದ್ದವು.
ನಗರಸಭೆಯ ಪೌರಕಾರ್ಮಿಕರು ನಿನ್ನೆ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಕಾರ್ಯಪ್ರವೃತ್ತರಾಗಿ ಸಂಜೆವರೆಗೂ ನಿರಂತರವಾಗಿ ಶ್ರಮಿಸಿ, ಸಂಪೂರ್ಣವಾಗಿ ನಗರವನ್ನು ಸ್ವಚ್ಛಗೊಳಿಸಿದರು.
ಪ್ರತಿಯೊಂದು ಉತ್ಸವಗಳು ಜಾತ್ರೆಗಳು ನಡೆದ ನಂತರ ನಗರವನ್ನು ಸ್ವಚ್ಛವಾಗಿಡಲು, ನಗರದ ನೈರ್ಮಲ್ಯ ಕಾಪಾಡಲು ರಸ್ತೆಗಿಳಿಯುವ ಪೌರಕಾರ್ಮಿಕರು ಸ್ವಚ್ಛತಾ ಸೈನಿಕರಾಗಿ ಕೆಲಸ ಮಾಡುತ್ತಾರೆ. ಅವರಿಗೆ ಸಮಾಜದಲ್ಲಿ ಗೌರವ ನೀಡಬೇಕಿರುವುದು ಮತ್ತು ಅವರ ಕೆಲಸವನ್ನು ಶ್ಲಾಘಿಸಬೇಕಿರುವುದು ನಾಗರಿಕರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಾಗರಿಕರು ಪೌರಕಾರ್ಮಿಕರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


