ಬೀದರ್: ರಾಜ್ಯಾದ್ಯಂತ ಎಲ್ ಪಿಜಿ ಸಿಲಿಂಡರ್ ಗಳ ಅಭಾವ ತಲೆದೂರಿರುವ ಬೆನ್ನಲ್ಲೇ, ಖದೀಮರು ಈಗ ಸಿಲಿಂಡರ್ ಗಳ ಮೇಲೆ ಕಣ್ಣಿಟ್ಟಿದ್ದಾರೆ. ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಇಟ್ಟಿದ್ದ ಆರು ಸಿಲಿಂಡರ್ಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ಶಾಲೆಯ ಅಡುಗೆ ಕೋಣೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ಅಲ್ಲಿ ಸಂಗ್ರಹಿಸಿಡಲಾಗಿದ್ದ 6 ಗ್ಯಾಸ್ ಸಿಲಿಂಡರ್ ಗಳನ್ನು ಕಳ್ಳತನ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಈ ಸಿಲಿಂಡರ್ ಗಳನ್ನು ಬಳಸಲಾಗುತ್ತಿತ್ತು. ಸಿಲಿಂಡರ್ ಗಳ ಕೊರತೆಯಿಂದ ಈಗಾಗಲೇ ಹೋಟೆಲ್ ಉದ್ಯಮ ಮತ್ತು ಸಾರ್ವಜನಿಕರು ಕಷ್ಟಪಡುತ್ತಿರುವಾಗ, ಇತ್ತ ಶಾಲೆಗೆ ಪೂರೈಕೆಯಾದ ಸಿಲಿಂಡರ್ಗಳನ್ನೇ ಕಳ್ಳತನ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿಯು ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೇವಲ ಶಾಲೆ ಮಾತ್ರವಲ್ಲದೆ, ಜಿಲ್ಲೆಯ ಇತರೆ ಭಾಗಗಳಲ್ಲೂ ಸಿಲಿಂಡರ್ ಕಳ್ಳತನ ವರದಿಯಾಗುತ್ತಿದೆ. ಇತ್ತೀಚೆಗೆ ಭಾಲ್ಕಿ ನಿವಾಸಿಯೊಬ್ಬರು ಗೋದಾಮಿಗೆ ಸಿಲಿಂಡರ್ ಖರೀದಿಸಲು ಹೋದಾಗ ಅಪರಿಚಿತ ವ್ಯಕ್ತಿಯೊಬ್ಬ ಸಿಲಿಂಡರ್ ಕದ್ದು ಪರಾರಿಯಾಗಿದ್ದ ಘಟನೆಯೂ ನಡೆದಿದೆ. ಬೆಂಗಳೂರಿನಲ್ಲೂ ಹಗಲು ಹೊತ್ತಿನಲ್ಲೇ ಅಪಾರ್ಟ್ಮೆಂಟ್ಗಳಿಗೆ ನುಗ್ಗಿ ಸಿಲಿಂಡರ್ ಕದಿಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಗ್ಯಾಸ್ ಅಭಾವವನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು, ಸಾರ್ವಜನಿಕ ಮತ್ತು ಸರ್ಕಾರಿ ಸಂಸ್ಥೆಗಳ ಆಸ್ತಿಯನ್ನು ಲೂಟಿ ಮಾಡುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


