ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಹುರುಳಗೇರೆ ಗ್ರಾಮದ ಗಿರೀಶ್ ಹೆಚ್.ಎನ್. ಅವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು (KSOU) ಕನ್ನಡ ವಿಷಯದಲ್ಲಿ ಡಾಕ್ಟರೇಟ್ (ಪಿಹೆಚ್.ಡಿ) ಪದವಿಯನ್ನು ಪ್ರದಾನ ಮಾಡಿದೆ.
ಜನವರಿ 31, 2026 ರಂದು ಮೈಸೂರಿನ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 21ನೇ ವಾರ್ಷಿಕ ಘಟಿಕೋತ್ಸವ ನಡೆಯಿತು. ಈ ಸಮಾರಂಭದಲ್ಲಿ ಸುಮಾರು 10,600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆದಿದ್ದು, ಇದೇ ಸಮಾರಂಭದಲ್ಲಿ ಕೆಎಸ್ ಒಯು ಪ್ರಾದೇಶಿಕ ನಿರ್ದೇಶಕ ಗಿರೀಶ್ ಹೆಚ್.ಎನ್ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಿಂದ ಪಿಹೆಚ್’ಡಿ ಪದವಿ ಪ್ರದಾನ ಮಾಡಿದರು.
ಸಂಶೋಧನಾ ವಿವರ:
ಗಿರೀಶ್ ಅವರು ಮೈಸೂರಿನ ಕೆಎಸ್ ಒಯು ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕರಾದ ಡಾ.ಡಿ.ನಾಗಣ್ಣ ಅವರ ಮಾರ್ಗದರ್ಶನದಲ್ಲಿ “ಗುಬ್ಬಿ ತಾಲ್ಲೂಕಿನ ಶಾಸನಗಳು: ಸಾಂಸ್ಕೃತಿಕ ಅಧ್ಯಯನ” ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧವನ್ನು ವಿಶ್ವವಿದ್ಯಾನಿಲಯವು ಅಂಗೀಕರಿಸಿ ಈ ಪದವಿ ನೀಡಿದೆ.
ಸಿ.ಎಸ್.ಪುರ ಹೋಬಳಿಯ ಹುರುಳಗೇರೆ ಗ್ರಾಮದ ನಿವಾಸಿಗಳಾದ ನಂಜೇಗೌಡ ಮತ್ತು ರತ್ನಮ್ಮ ದಂಪತಿಯ ಪುತ್ರರಾದ ಇವರು, ಗ್ರಾಮೀಣ ಭಾಗದಿಂದ ಬಂದು ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಸದ್ಯ ಗಿರೀಶ್ ಹೆಚ್.ಎನ್. ಅವರು ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರದಲ್ಲಿ ಪ್ರಾದೇಶಿಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


