ಕೊರಟಗೆರೆ: ಸರ್ಕಾರ ಒಳ ಮೀಸಲಾತಿ ಜಾರಿ ಮಾಡಿದ್ದಲ್ಲಿ ಸಾಕಷ್ಟು ನಮ್ಮ ಸಮುದಾಯದ ಮುಂದಿನ ಪೀಳಿಗೆಗೆ ಬಹಳ ತೊಂದರೆಯಾಗುತ್ತದೆ ಎಂದು ತಾಲೂಕು ಬಂಜಾರ ಲಂಬಾಣಿ ಸಂಘದ ಖಜಾಂಚಿ ವಿಜಯಶಂಕರ್ ಹೇಳಿದರು.
ಅವರು ತಾಲೂಕಿನ ಪಕೀರಪ್ಪನ ಪಾಳ್ಯ ಮೇಗಳ ತಾಂಡದಲ್ಲಿ ಏರ್ಪಡಿಸಿದ್ದ ಬಂಜಾರ ಸಂಘದ ವಾರ್ಷಿಕ ಮಹಾಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾಕಷ್ಟು ಕಷ್ಟಪಟ್ಟು ನಮ್ಮ ಸಮುದಾಯದವರು ಬೆಟ್ಟ ಗುಡ್ಡಗಳಲ್ಲಿ ವಾಸ ಮಾಡಿ ಬಂದವರು, ನಮ್ಮ ಸಮುದಾಯದ ಎಲ್ಲಾ ಯುವಕ ಯುವತಿಯರು ಮುಖ್ಯ ವಾಹಿನಿಗೆ ಬರಬೇಕಾದರೆ ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡಿದರೆ ನಮ್ಮ ಸಮುದಾಯದವರು ದೊಡ್ಡಮಟ್ಟದ ಸಮಸ್ಯೆಗಳನ್ನು ಎದುರಿಸಬೇಕಾಗಿರುತ್ತದೆ. ನಮ್ಮ ತಾಲೂಕಿನಲ್ಲಿ ಮಂಜೂರಾಗಿ ಅಪೂರ್ಣಗೊಂಡಿರುವ ಸಮುದಾಯ ಭವನವನ್ನು ಸಂಬಂಧಪಟ್ಟ ಅಧಿಕಾರಿಗಳು ಪೂರ್ಣಗೊಳಿಸಬೇಕು ಇಲ್ಲವಾದರೆ ಹೋರಾಟದ ಅನಿವಾರ್ಯತೆ ಇದೆ ಎಂದು ಹೇಳಿದರು.
ತಾಲೂಕು ಬಂಜಾರ ಲಂಬಾಣಿ ಸಂಘದ ಉಪಾಧ್ಯಕ್ಷ ಹರೀಶ್ ಬಾಬು ಪಿ.ಎಸ್. ಮಾತನಾಡಿ, ನಮ್ಮ ಸಮುದಾಯದವರು ಒಗ್ಗಟ್ಟಾಗಿ ಕೆಲಸ ಮಾಡದೇ ಇದ್ದರೆ ನಮ್ಮ ಮುಂದಿನ ಪೀಳಿಗೆ ಮಕ್ಕಳು ಸಮಾಜಕ್ಕೆ ಯಾವುದೇ ರೀತಿಯ ಕೊಡುಗೆಗಳನ್ನು ಕೊಡಲು ಸಾಧ್ಯವಿಲ್ಲ. ಎಲ್ಲಾ ನಮ್ಮ ಸಮುದಾಯದ ಕುಟುಂಬದವರು ಸರ್ಕಾರ ನಮಗಾಗಿ ರೂಪಿಸಿರುವ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಮುಂದೆ ಬರಬೇಕು ಕೊರಟಗೆರೆ ತಾಲೂಕಿನಲ್ಲಿ ಇದುವರೆಗೂ ಸಹ ನಮ್ಮ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿ ನಿಲಯಗಳಾಗಲಿ, ಸಮುದಾಯ ಭವನಗಳಾಗಲಿ ನಿರ್ಮಾಣವಾಗದೇ ಇರುವುದು ಖಂಡನೀಯ. ಇದರ ವಿಚಾರವಾಗಿ ನಾವು ಎಷ್ಟೇ ಪ್ರಯತ್ನ ಪಟ್ಟರು ಯಾವುದೇ ರೀತಿಯ ಫಲ ಸಿಕ್ಕಿಲ್ಲ. ನಮ್ಮ ಸಮುದಾಯದ ಎಲ್ಲಾ ಯುವಕರು ಒಗ್ಗಟ್ಟಾಗಿ ಸಂಘಟನೆ ಮಾಡಿ ನಮ್ಮ ಸಂಘವನ್ನು ಬಲಗೊಳಿಸಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಬಂಜಾರ ಸಂಘದ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಗೌರವಾಧ್ಯಕ್ಷ ಮೀಸೆ ಲಕ್ಷ್ಮ ನಾಯಕ್, ಕಾರ್ಯದರ್ಶಿ ವಿ.ಎನ್. ಮೂರ್ತಿ, ತಾಲೂಕು ಸಂಚಾಲಕ ಬಾಬುನಾಯ್ಕ್ ಎಂ. ಸಿದ್ದೇಶ್, ಲಕ್ಷ್ಮ ನಾಯ್ಕ, ಪುಟ್ಟರಾಜು, ವೆಂಕಟೇಶ್ ಬಾಬು, ಕೃಷ್ಣ ನಾಯ್ಕ, ಆನಂದ್ ಸಮುದಾಯದ ಮುಖಂಡರುಗಳಾದ ಲಚ್ಚಿ ರಾಮ ನಾಯ್ಕ, ರಾಮಸ್ವಾಮಿ, ಲಂಕೇಶ್ ನಾಯಕ್, ರಂಜಿತ್ ಬಾಲಕೃಷ್ಣ ಸೇರಿದಂತೆ ಮಹಿಳೆಯರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4