ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತರಾತುರಿಯಲ್ಲಿ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿರುವುದರ ಹಿಂದೆ ಕೇಂದ್ರ ಹಾಗೂ ಬಿಜೆಪಿ ನಾಯಕರ ಒತ್ತಡವಿದೆ ಎಂದು ಸಚಿವ ರಾಮಲಿಂಗರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ನಾಯಕರು ಅವರು ಕುಣಿಸಿದಂತೆ ರಾಜ್ಯಪಾಲರು ಕುಣಿಯುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ರಾಜ್ಯಪಾಲರ ಸ್ಥಾನಕ್ಕೆ ಇದು ಶೋಭೆ ತರುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಅವರ ಗಣಿ ಹಗರಣದ ತನಿಖೆಗೆ ಲೋಕಾಯುಕ್ತ ಸಂಸ್ಥೆಯು ಅನುಮತಿ ಕೇಳಿದ್ದರೂ ರಾಜ್ಯಪಾಲರು ಕಳೆದ 10 ತಿಂಗಳಿಂದ ಕಡತವನ್ನು ಮೂಲೆಗೆ ತಳ್ಳಿ ಕೂತಿದ್ದಾರೆ. ಶಶಿಕಲಾ ಜೊಲ್ಲೆಯ ಮೊಟ್ಟೆ ಹಗರಣದ ವಿರುದ್ಧದ ತನಿಖೆಗೆ ಅನುಮತಿ ಕೋರಿದ್ದರು. ಆದರೆ ಈ ಪ್ರಕರಣ ರಾಜ್ಯಪಾಲರ ಯಾವುದೆ ಪ್ರತಿಕ್ರಿಯೆ ಇಲ್ಲದೆ ಸುಮಾರು 2 ವರ್ಷಗಳಿಂದ ಬಾಕಿ ಉಳಿದಿದೆ. ಅದಷ್ಟೇ ಅಲ್ಲ ಮುರುಗೇಶ್ ನಿರಾಣಿ ಮಂತ್ರಿಯಾಗಿದ್ದಾಗ ಬೃಹತ್ ಕೈಗಾರಿಕೆ ಇಲಾಖೆ ವ್ಯಾಪ್ತಿಯಡಿ ಬರುವ ಮಾರ್ಕೆಟಿಂಗ್, ಜಾಹೀರಾತು ಮತ್ತು ಪ್ರಚಾರ ಸಂಸ್ಥೆಯಲ್ಲಿ 2011-15ರ ನಡುವೆ ನಡೆದ ಅಕ್ರಮ ನೇಮಕಾತಿಯ ತನಿಖೆಗೆ ಅನುಮತಿ ಕೋರಿರುವ ಕಡತ ನಿದ್ರಾವಸ್ಥೆಯಲ್ಲಿದೆ. ಜನಾರ್ಧನ್ ರೆಡ್ಡಿಯ ಗಣಿ ಹಗರಣದ ಕಡತ ರಾಜಭವನದಲ್ಲಿ ಧೂಳು ಹಿಡಿದಿದೆ ಎಂದು ಸಚಿವರು ಈ ಮೊದಲ ಪ್ರಕರಣಗಳನ್ನು ಉಲ್ಲೇಖಿಸಿದರು. ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮತ್ತು ಮಿತ್ರಪಕ್ಷದ ಹಗರಣಗಳ ತನಿಖೆಗೆ ಅನುಮತಿ ಕೋರಿರುವ ಕಡತಗಳು ರಾಜಭವನದಲ್ಲಿ ವರ್ಷಗಳಿಂದ ಇದ್ದು, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಾಜ್ಯಪಾಲರು ಸಿದ್ದರಾಮಯ್ಯ ಅವರ ವಿಚಾರದಲ್ಲಿ ಮಾತ್ರ ತಮ್ಮ ಮಂತ್ರದಂಡವನ್ನು ಉಪಯೋಗಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q