ಗುಬ್ಬಿ: ಗ್ರಾಹಕ ಪಾವತಿಸಿದ ಹಣವನ್ನು ಬೆಸ್ಕಾಂಗೆ ಪಾವತಿ ಮಾಡದೇ ವಂಚಿರುವ ಘಟನೆ ಗುಬ್ಬಿ ನಗರದ ಬೆಸ್ಕಾಂನಲ್ಲಿ ನಡೆದಿದ್ದು, ಕಿರಿಯ ಸಹಾಯಕರಾದ ಮಲ್ಲೇಶ್ ನಡೆಸಿದ ವಂಚನೆಗೆ ಗುಬ್ಬಿ ಬೆಸ್ಕಾಂ ಎಇಇ ಅನಿಲ್ ಕುಮಾರ್ ದಂಡ ಪಾವತಿಸುವಂತಾಗಿದೆ.
ಗ್ರಾಹಕ ರೇಣುಕಾ ಪ್ರಸಾದ್ ಎಂಬವರು ಒಂದು ತಿಂಗಳ ಹಿಂದೆ ತಮ್ಮ ಅಂಗಡಿ ಮತ್ತು ರಾಗಿ ಮಿಲ್ ನ ಒಟ್ಟು 12,360 ರೂಪಾಯಿ ವಿದ್ಯುತ್ ಬಿಲ್ ನ್ನು ಗುಬ್ಬಿ ನಗರದ ಬೆಸ್ಕಾಂ ಕಚೇರಿಗೆ ತೆರಳಿ ಪಾವತಿಸಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಕಿರಿಯ ಸಹಾಯಕರಾದ ಮಲ್ಲೇಶ್, ಗ್ರಾಹಕ ನೀಡಿದ ಹಣವನ್ನು ಪಾವತಿಸದೇ ಪ್ರಿಂಟರ್ ಸಮಸ್ಯೆ ಇದೆ ಎನ್ನುವ ಕಾರಣ ನೀಡಿ ರಶೀದಿ ನೀಡದೇ, ಹಣವೂ ಪಾವತಿಸದೇ ವಂಚಿದ್ದಾರೆ ಎನ್ನಲಾಗಿದೆ.
ಇದಾದ ಬಳಿಕ ತಾವು ವಂಚನೆಗೊಳಗಾಗಿರುವ ವಿಚಾರ ಗ್ರಾಹಕಗೆ ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಅವರು, ಸಿಬ್ಬಂದಿ ಮಲ್ಲೇಶ್ ವಿರುದ್ದ ಬೆಸ್ಕಾಂ ಎಇಇ ಅನಿಲ್ ಕುಮಾರ್ ಗೆ ದೂರು ನೀಡಿದ್ದಾರೆ. ಅನಿಲ್ ಕುಮಾರ್ ಅವರು ಮಲ್ಲೇಶ್ ನ್ನು ವಿಚಾರಣೆ ನಡೆಸಿದಾಗ, ಹಣ ಪಾವತಿ ಮಾಡಿಲ್ಲ ಎಂದು ಆತ ಒಪ್ಪಿಕೊಂಡಿದ್ದು, ಪ್ರಿಂಟರ್ ಸಮಸ್ಯೆ ಇತ್ತು ಎನ್ನುವ ಕಾರಣ ನೀಡಿದ್ದಾನೆ.
ಇನ್ನೂ ಈ ವಿಚಾರ ಬೆಸ್ಕಾಂ ಮೇಲಾಧಿಕಾರಿ ಜಗದೀಶ್ ಅವರ ಗಮನಕ್ಕೂ ಬಂದಿದ್ದು, ಅವರು ಮಲ್ಲೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕರ್ತವ್ಯ ಲೋಪದಡಿಯಲ್ಲಿ ನಿನ್ನನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರಲ್ಲದೇ , ಈತನ ವಿರುದ್ಧ ಶಿಸ್ತು ಕ್ರಮಕ್ಕೆ ವರದಿ ನೀಡುವಂತೆ ಎಇಇ ಅನಿಲ್ ಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ.
ಇನ್ನೂ ಸಿಬ್ಬಂದಿಯ ವಂಚನೆಯಿಂದ ಹತಾಶೆಗೊಂಡ ಬೆಸ್ಕಾಂ ಎಇಇ ಅನಿಲ್ ಕುಮಾರ್ ಕೊನೆಗೆ ತಾವೇ ಗ್ರಾಹಕರ ಹಣವನ್ನು ಸಂದಾಯ ಮಾಡಲು ಮುಂದಾಗಿದ್ದಾರೆ. ಸದ್ಯ ಬೆಸ್ಕಾಂನಲ್ಲಿ ಹಣ ಪಾವತಿಸುವ ವೇಳೆ ಗ್ರಾಹಕರು ಎಚ್ಚರಿಯಿಂದಿರಬೇಕು ಎನ್ನುವಂತಹ ಮಾತುಗಳು ಕೇಳಿ ಬಂದಿವೆ.
ವರದಿ: ಡಿ.ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy