ಸರಗೂರು: ಮಳೆ ಹಾನಿಯ ಫಲಾನುಭವಿಗಳಿಗೆ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಕೊತ್ತೇಗಾಲದಲ್ಲಿ ಗ್ರಾಮಸ್ಥರ ನಡುವೆಯೇ ಗೊಂದಲ ಸೃಷ್ಟಿಯಾಗಿದ್ದು, ಒಂದೆಡೆ ಕೊತ್ತೆಗಾಲದ ಕೆಲವು ಗ್ರಾಮಸ್ಥರು ಪರಿಹಾರ ನೀಡಲು ಅಧಿಕಾರಿಗಳು ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರೆ, ಇನ್ನೊಂದು ಗ್ರಾಮಸ್ಥರ ತಂಡ, ಇದು ಸುಳ್ಳು, ಅಧಿಕಾರಿಗಳು ಯಾವುದೇ ಹಣದ ಬೇಡಿಕೆ ಇಟ್ಟಿಲ್ಲ ಎಂದು ಆರೋಪ ನಿರಾಕರಿಸಿದ್ದಾರೆ.
ಗ್ರಾಮಸ್ಥರ ಒಂದು ತಂಡ, “ಮಳೆಯಿಂದ ಹಾನಿಯಾದ ಮನೆಗಳ ಪರಿಹಾರದ ಫಲಾನುಭವಿಗಳ ಪಟ್ಟಿಗೆ ಸೇರಿಸಲು ಪರಿಶೀಲನೆಗೆ ಬರುವ ಗ್ರಾಮ ಲೆಕ್ಕಿಗರು 60-80 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡಿದವರ ಹೆಸರನ್ನು ಮಾತ್ರ ಫಲಾನುಭವಿಗಳ ಪಟ್ಟಿಗೆ ಸೇರಿಸಿ ಉಳಿದ ಹಣ ನೀಡದ 20 ಬಡಕುಟುಂಬದ ಮನೆಗಳನ್ನು ಫಲಾನುಭವಿಗಳ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ” ಎಂದು ಆರೋಪಿಸಿ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟಿಸಿ ತನಿಖೆ ನಡೆಸುವಂತೆ ಆಗ್ರಹಿಸಿ ತಹಸೀಲ್ದಾರ್ ರವರಿಗೆ ಮನವಿಪತ್ರ ಸಲ್ಲಿಸಿದರು.
ಆದರೆ, ಇದೀಗ ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮತ್ತೊಂದು ಗ್ರಾಮಸ್ಥರ ಗುಂಪು, ತಾಲ್ಲೂಕು ಕಛೇರಿಗೆ ಭೇಟಿ ನೀಡಿ ಗ್ರಾಮಲೆಕ್ಕಿಗರು ಯಾವುದೇ ರೀತಿಯ ಹಣದ ಆಮಿಷಕ್ಕೆ ಒಳಗಾಗದೆ ಫಲಾನುಭವಿಗಳ ಪಟ್ಟಿಯನ್ನು ಸಿದ್ಧ ಪಡಿಸಿದ್ದಾರೆ. ರಾಜಕೀಯದ ಉದ್ದೇಶದಿಂದ ಕೆಲವರು ಅಪಪ್ರಚಾರ ಮಾಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ತಾಲ್ಲೂಕು ಆಡಳಿತ ಯಾವುದೇ ರೀತಿಯ ಅಪಪ್ರಚಾರಕ್ಕೆ ಕಿವಿ ಕೊಡದೆ ಈಗಾಗಲೇ ಗ್ರಾಮಲೆಕ್ಕಿಗರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಿದ್ಧಪಡಿಸಿರುವ ಫಲಾನುಭವಿಗಳಿಗೆ ಪರಿಹಾರವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಶಿರಸ್ತಾರ ಗುರುರಾಜ್, ಈ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಹಾಗೂ ಅವರ ಮಾರ್ಗದರ್ಶನದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಚಲುವಪ್ಪ, ಮಹದೇವು, ಮಹೇಶ್, ಲಕ್ಷ್ಮೀದೇವಿ, ಶೋಭಾ, ಗೌರಮ್ಮ, ಕುಮಾರ್, ಸಿದ್ದರಾಜು ಕಳೇಗೌಡನಹುಂಡಿ. ಮಾಜಿ ಸದಸ್ಯ ಪುರದಕಟ್ಟೆ ಬೆಟ್ಟನಾಯಕ, ಗ್ರಾಮಸ್ಥರಾದ ಪುಟ್ಟೇಗೌಡ, ಎನ್.ನಿಂಗರಾಜು, ಚಿಕ್ಕಣ್ಣ, ಗಣೇಶ್, ಚಾಮನಾಯ್ಕ, ಭೀಮನಾಯ್ಕ, ಸಿದ್ಧಲಿಂಗಯ್ಯ, ಮಹದೇವ, ಶಿವಣ್ಣ, ಮಹೇಶ್, ನಾಗೇಶ್, ಮಹದೇವಶೆಟ್ಟಿ, ಶಿವರಾಜು, ಸಿ.ರವಿ, ಮಾದಯ್ಯ. ನಾಗೇಂದ್ರ ದೇವಲಾಪುರ ಗ್ರಾಪಂ ಉಪಾಧ್ಯಕ್ಷ ಹೆಗ್ಗನೂರು. ಚಲುವರಾಜು ಮಾ ಗ್ರಾ.ಪಂ. ಸದಸ್ಯ ಹುಣಸಹಳ್ಳಿ, ಚಿನ್ನಯ್ಯ.ಮಾ ಅಧ್ಯಕ್ಷ ಗ್ರಾಪಂ ಹಳೆಯೂರು ಮುಂತಾದವರು ಹಾಜರಿದ್ದರು.
ವರದಿ: ಚಂದ್ರಹಾದನೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700