ಮಧುಗಿರಿ: ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ತರುವ ಮೂಲಕ ಸಣ್ಣ ಸಣ್ಣ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವಕಾಶ ಕಲ್ಪಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ಪಟ್ಟಣದ ರಾಜೀವ ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ಮಧುಗಿರಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು. ಕೆ. ಎನ್. ರಾಜಣ್ಣನವರು ಸಹಕಾರಿ ಕ್ಷೇತ್ರದಲ್ಲಿ ತಂದಿರುವ ಮೀಸಲಾತಿ ಇಡೀ ರಾಜ್ಯ ವ್ಯಾಪ್ತಿಗೆ ಅನ್ವಯವಾಗಲಿದ್ದು, ಸಣ್ಣ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಿದೆ ಇದರಿಂದ ಡಾ. ಬಿ. ಆರ್. ಅಂಬೇಡ್ಕರ್ ರವರ ಆಶಯ ಸಾಕಾರಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ರಾಜಣ್ಣ ರವರು ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂದು ಸಂಕಲ್ಪಿಸಿದ್ದು, ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಅಧಿಕಾರಿಗಳು ಮುತುವರ್ಜಿ ವಹಿಸಿ 18 ಎಕರೆ ಜಾಗ ನಿಗದಿಪಡಿಸಿದ್ದಾರೆ,
ತಾಲೂಕಿನಲ್ಲಿ 67988 ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ಅಡಿ 134 ಕೋಟಿ ರೂಗಳು ಜಮೆ ಆಗಿದೆ.35600 ರೈತರ ಖಾತೆಗಳಿಗೆ ಬೆಳೆ ವಿಮೆ ಯೋಜನೆ ಅಡಿ 26 ಕೋಟಿ ರೂಗಳು ಜಮೆ ಆಗಿದೆ ಎಂದರು.
ಲೋಕೋಪಯೋಗಿ ಇಲಾಖೆಯ 25 ಕೋಟಿ ರೂಗಳ ಅನುದಾನದಲ್ಲಿ ಮಧುಗಿರಿ ಪಟ್ಟಣವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ, ತಾಲೂಕಿನ 42 ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವತಿಯಿಂದ ಸುಮಾರು 268 ಕೋಟಿ ರೂಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ದೊಡ್ಡೇರಿ ಹೋಬಳಿಯ 8 ಕೆರೆಗಳನ್ನು ಎತ್ತಿನಹೊಳೆ ಯೋಜನೆ ಅಡಿ ಪುನಶ್ಚೇತನ ಗೊಳಿಸಲಾಗುವುದು.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಂದರ್ಭದಲ್ಲಿ ನಡೆಯುವ ಪಥ ಸಂಚಲನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಲ್ಲಿ ಶಿಸ್ತು ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸರಿಸುಮಾರು 200 ವರ್ಷಗಳಷ್ಟು ಕಾಲ ಭಾರತವನ್ನು ಆಳಿದ ಬ್ರಿಟಿಷರಿಂದ ಮುಕ್ತವಾದ ದಿನವೇ ಆಗಸ್ಟ್ 15. ಕೆಲವು ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಸುದೀರ್ಘ ಹೋರಾಟದ ಫಲವಾಗಿ ಆಗಸ್ಟ್ 15 ರಂದು ಭಾರತವು ಸ್ವಾತಂತ್ರ್ಯವನ್ನು ಗಳಿಸಿತು. ಈ ಸವಿನೆನಪಿಗಾಗಿ ಭಾರತದಾದಂತ್ಯ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ ಎಂದರು.
ತಹಶೀಲ್ದಾರ್ ಸಿಗ್ಗಬತ್ ವುಲ್ಲ, ತಾ. ಪಂ.ಇಒ ಲಕ್ಷ್ಮಣ್, ಬಿ ಇ ಒ ಹನುಮಂತರಾಯಪ್ಪ,ಡಿವೈಎಸ್ಪಿ ಎನ್. ಬಿ. ರಾಮಚಂದ್ರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗೇಶ್ ಬಾಬು, ಕ. ಸಾ. ಪ. ಅಧ್ಯಕ್ಷೆ ಸಹನಾ ನಾಗೇಶ್,ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ,ಪುರಸಭೆ ಮಾಜಿ ಅಧ್ಯಕ್ಷರಾದ ಎನ್. ಗಂಗಣ್ಣ,ಮೊಹಮ್ಮದ್ ಅಯ್ಯೂಬ್, ಸದಸ್ಯರಾದ ಮಂಜುನಾಥ್ಆ ಚಾರ್,ಲಾಲಾ ಪೇಟೆ ಮಂಜುನಾಥ್, ಅಲೀಮ್, ಅಲ್ಪಸಂಖ್ಯಾತರ ನಗರ ಅಧ್ಯಕ್ಷ ಸೈಯದ್ ಅಲಾವುದ್ದೀನ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಅಬಿದ್, ಮಧುಗಿರಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q