ಕೊರಟಗೆರೆ : ಕೆರೆಗಳಲ್ಲಿ ರೈತರ ಜಮೀನಿಗೆ ಮಣ್ಣು ತುಂಬಲು ಅವಕಾಶ ಮಾಡಿ ಕೊಡಬೇಕು, ಜಮೀನುಗಳ ಮಣ್ಣು ಮಳೆ ಬಂದ ವೇಳೆ ಕೊಚ್ಚಿಕೊಂಡು ಕೆರೆ–ಕಟ್ಟೆಗಳಿಗೆ ಸೇರುತ್ತಿದೆ, ಇದು ಮತ್ತೆ ರೈತರ ಜಮೀನಿಗೆ ಸೇರಬೇಕು ಎಂದು ರಾಜ್ಯ ಹಸಿರು ಸೇನೆ ಸಂಚಾಲಕ ಆನಂದ್ ಪಾಟೇಲ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದರು. ಅರಣ್ಯ ಇಲಾಖೆಯು ಸುಮಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಿ ರೈತರನ್ನು ಶೋಷಣೆ ಮಾಡುತ್ತಿದೆ ಎಂದು ಹೇಳಿದರು.
ನಗರ ವ್ಯಾಪ್ತಿಗಳಲ್ಲಿ ಸುಮಾರು 50 ರಿಂದ 60 ವರ್ಷ ರೈತರು ಉಳುಮೆ ಮಾಡಿಕೊಂಡು ಟಿ.ಟಿ.ಕಟ್ಟಿ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಸರ್ಕಾರ ಸ್ಪಷ್ಟ ನಿರ್ಧಾರ ಕೊಟ್ಟಿಲ್ಲ, ಕೆ.ಐ.ಎ.ಡಿ.ಬಿ ಇಲಾಖೆ ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಇಂದು ಈ ಪ್ರದೇಶದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಬಂದಿವೆ ಎಂದು ಹೇಳಿದರು.
ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಭರವಸೆ ನೀಡಿ ಭೂಮಿ ಸ್ವಾಧೀನ ಪಡಿಸಿಕೊಳ್ಳುತ್ತಿದೆ, ಆದರೆ ಉದ್ಯೋಗ ನೀಡದೆ ಶೋಷಿಸುತ್ತಾ ಬಂದಿದೆ, ಈ ಎಲ್ಲಾ ಸಮಸ್ಯೆ ಪ್ರಶ್ನಿಸಿ ಮಾ.೯ ರಂದು ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖೈಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
ಜಿಲ್ಲಾಧ್ಯಕ್ಷ ಕೆ.ಎಸ್ ಧನಂಜಯಾರಾಧ್ಯ ಮಾತನಾಡಿ, ಭದ್ರ ಮೇಲ್ದಂಡೆ, ಎತ್ತಿನಹೊಳೆ, ಹೇಮಾವತಿ ನೀರಿನ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕೆರೆ–ಕಟ್ಟೆಗಳಿಗೆ ನೀರು ಒದಗಿಸಬೇಕು, ಬಾಕಿಯಿರುವ ಸಾಗುವಳಿಯನ್ನು ರೈತರಿಗೆ ಮಂಜೂರು ಮಾಡಬೇಕು. 2013 ರ ಕಾಯ್ದೆಯಂತೆ ಕೃಷಿ ಭೂಮಿಯನ್ನು ರೈತರಿಂದ ಬಲವಂತವಾಗಿ ವಶಪಡಿಸಿಕೊಳ್ಳಬಾರದು, ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಕೈಗಾರಿಕೆ ಕಂಪನಿ ರೈತರ ಮಕ್ಕಳಿಗೆ ಉದ್ಯೋಗ ಕಲ್ಪಿಸಬೇಕು ಎಂದು ಹೇಳಿದರು.
ತಾ.ಅಧ್ಯಕ್ಷ ಸಿದ್ದರಾಜು ಮಾತನಾಡಿ, ರೈತರು ಜಿಲ್ಲೆಯಲ್ಲಿ ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯುತ್ ಇಲಾಖೆ ರೈತರಿಗೆ ಸಮರ್ಪಕ ವಿದ್ಯುತ್ ನೀಡದೆ ಕಣ್ಣಾಮುಚ್ಚಾಲೆ ಆಡುತ್ತಿದೆ. ರೈತರಿಗೆ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಟಿ.ಸಿ ಕಂಬ, ಲೈನ್ ಇತರೆ ಉಪಕರಣಗಳ ಖರ್ಚು ವೆಚ್ಚಗಳನ್ನು ತ್ವರಿತವಾಗಿ ಭರಿಸಬೇಕಿದೆ ಎಂದು ಹೇಳಿದರು.
ಫಲವತ್ತಾದ ಮಣ್ಣು ಮಳೆಯಿಂದ ಕೆರೆ–ಕಟ್ಟೆಗೆ ಸೇರುತ್ತಿದೆ, ಇದು ಪುನಃ ಮತ್ತೆ ರೈತರ ಜಮೀನುಗಳಿಗೆ ಸೇರಬೇಕು. ಅರಣ್ಯ ಇಲಾಖೆ ರೈತರ ಮೇಲೆ ನಡೆಸುತ್ತಿರುವ ಶೋಷಣೆಯನ್ನು ನಿಲ್ಲಿಸಬೇಕು. ಹೊಸ ವಿದ್ಯುತ್ ನಿಯಮದಿಂದ ರೈತರಿಗೆ ಆರ್ಥಿಕ ಹೊರೆಯಾಗಿದ್ದು, ಹಿಂದಿನಂತೆ ಯಾವುದೇ ಶುಲ್ಕವಿಲ್ಲದೇ ಉಪಕರಣಗಳನ್ನು ಒದಗಿಸಬೇಕು.
— ಸಿದ್ದರಾಜು, ತಾ. ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಲೋಕಣ್ಣ, ಜಿಲ್ಲಾ ಕಾರ್ಯದರ್ಶಿ ಪುಟ್ಟರಾಜು, ಕೆಂಪರಾಜು, ರಾಮಚಂದ್ರಯ್ಯ, ಮಲ್ಲೇಶಯ್ಯ, ವೀರಯ್ಯ, ಲಕ್ಷ್ಮೀನಾಯ್ಕ, ಗಿರೀಶ್ ಆರಾಧ್ಯ, ಸಿದ್ದನಂಜರಾಧ್ಯ ಸೇರಿದಂತೆ ತಾಲೂಕಿನ ರೈತ ಸಂಘದ ಪ್ರಮುಖರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


