ಗುಬ್ಬಿ: ಪಶ್ಚಿಮ ಏಷ್ಯಾ ಭಾಗದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಹಾಗೂ ಆಟೊ ಗ್ಯಾಸ್ ದರಗಳು ನಿರಂತರವಾಗಿ ಏರಿಕೆಯಾಗುತ್ತಿರುವುದನ್ನು ಖಂಡಿಸಿ, ಗುಬ್ಬಿ ಪಟ್ಟಣದ ಆಟೊ ಚಾಲಕರು ಮತ್ತು ಮಾಲೀಕರು ಸೋಮವಾರ ಸಂಜೆ ಬಂಕ್ ಮುಂದೆ ಪ್ರತಿಭಟನೆ ನಡೆಸಿದರು.
ಗ್ಯಾಸ್ ಬಂಕ್ ಮಾಲೀಕರು ಪ್ರತಿ ಕೆ.ಜಿ. ಗ್ಯಾಸ್ ಮೇಲೆ ಸುಮಾರು ₹30 ರಷ್ಟು ಹೆಚ್ಚಳ ಮಾಡಿದ್ದಾರೆ ಎಂದು ಚಾಲಕರು ದೂರಿದ್ದಾರೆ. ಸರ್ಕಾರದ ನಿಯಂತ್ರಣವಿಲ್ಲದ ಕಾರಣ ಬಂಕ್ ಮಾಲೀಕರು ತಮ್ಮ ಇಚ್ಛೆಯಂತೆ ದರ ಏರಿಸುತ್ತಿದ್ದಾರೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪವಾಗಿದೆ.
“ಗ್ಯಾಸ್ ಬೆಲೆ ಏರಿಕೆಯಾದಂತೆ ನಾವು ಪ್ರಯಾಣಿಕರಿಂದ ಹೆಚ್ಚಿನ ಬಾಡಿಗೆ ವಸೂಲಿ ಮಾಡಲು ಸಾಧ್ಯವಿಲ್ಲ. ದರ ಹೆಚ್ಚಿಸಿದರೆ ಪ್ರಯಾಣಿಕರು ನಮ್ಮೊಂದಿಗೆ ಜಗಳಕ್ಕೆ ಬರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಜೀವನ ನಡೆಸುವುದು ಹೇಗೆ?” ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆಹಾರ ನಿರೀಕ್ಷಕಿ ವೀಣಾ ಅವರು ಬಂಕ್ ಮಾಲೀಕರೊಂದಿಗೆ ಮಾತುಕತೆ ನಡೆಸಿದರು. ಆದರೆ, ಬೆಲೆ ಕಡಿಮೆ ಮಾಡಲು ಮಾಲೀಕರು ಒಪ್ಪಲಿಲ್ಲ.
ಈ ಸಮಸ್ಯೆಯನ್ನು ತಹಶೀಲ್ದಾರ್ ಗಮನಕ್ಕೆ ತಂದು, ಬಂಕ್ ಮಾಲೀಕರಿಗೆ ನೋಟಿಸ್ ನೀಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಒಂದು ವೇಳೆ ದರ ಇಳಿಕೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಬಂಕ್ ಮುಂದೆ ಆಟೊ ನಿಲ್ಲಿಸಿ ತೀವ್ರ ಸ್ವರೂಪದ ಹೋರಾಟ ಮಾಡುವುದಾಗಿ ಚಾಲಕರು ಎಚ್ಚರಿಸಿದ್ದಾರೆ.
ತಾಲ್ಲೂಕು ಆಡಳಿತವು ಕೂಡಲೇ ಮಧ್ಯಪ್ರವೇಶಿಸಿ ಆಟೊ ಚಾಲಕರ ನೆರವಿಗೆ ಧಾವಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


