ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಗುತ್ತಿಗೆ ಕಾಮಗಾರಿಗಳ ಮೊತ್ತದ ಶೇಕಡ 40ರಷ್ಟು ಲಂಚದ ರೂಪದಲ್ಲೇ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೇಬು ಸೇರುತ್ತಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿರುವುದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಪ್ರಮುಖ ಕಾಮಗಾರಿಗಳನ್ನು ನಿರ್ವಹಿಸುವ ಲೋಕೋಪಯೋಗಿ, ಜಲ ಸಂಪನ್ಮೂಲ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಆರೋಗ್ಯ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮಂಜೂರಾದ ಅನುದಾನದ ಅರ್ಧದಷ್ಟು ಮೊತ್ತ ಲಂಚದ ರೂಪದಲ್ಲೇ ಕೊಳ್ಳೆಯಾಗುತ್ತಿದೆ ಎಂದು ಸಂಘಟನೆ ದೂರಿನಲ್ಲಿ ಆರೋಪಿಸಿದೆ. ಅನುದಾನ ಮಂಜೂರಾತಿಯಿಂದ ಬಿಲ್ ಪಾವತಿಯವರೆಗೆ ಲಂಚವೇಎಲ್ಲವನ್ನೂ ನಿರ್ಧರಿಸುತ್ತಿದ್ದು, ‘ಗುತ್ತಿಗೆದಾರರ ಬಳಿ ಹಣ ಸೃಷ್ಟಿಸುವ ಮಂತ್ರದಂಡವಿದೆ ಎಂದು ಭಾವಿಸಿ ಸುಲಿಗೆ ಮಾಡಲಾಗುತ್ತಿದೆ’ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ವಿವರಿಸಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ರಾಜ್ಯದಲ್ಲಿ ಸಿವಿಲ್, ಎಲೆಕ್ಟ್ರಿಕ್ ಸೇರಿದಂತೆ ವಿವಿಧ ಬಗೆಯ ಕಾಮಗಾರಿಗಳನ್ನು ನಿರ್ವಹಿಸುವ ಗುತ್ತಿಗೆದಾರರು ಸದಸ್ಯರಾಗಿರುವ 52 ಅಸೋಸಿಯೇಷನ್ ಗಳು ರಾಜ್ಯ ಗುತ್ತಿಗೆದಾರರ ಸಂಘದ ಸದಸ್ಯತ್ವ ಹೊಂದಿವೆ. ಒಟ್ಟು ಒಂದು ಲಕ್ಷಕ್ಕೂ ಅಧಿಕ ಗುತ್ತಿಗೆದಾರರು ಸದಸ್ಯರಾಗಿರುವ ಈ ಸಂಘ ಸರ್ಕಾರದ ಕಾಮಗಾರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತು ದನಿ ಎತ್ತಿದ್ದು, ಸ್ವಯಂಪ್ರೇರಿತವಾಗಿ ತನಿಖೆಗೆ ಆದೇಶಿಸುವಂತೆ ಪ್ರಧಾನಿಯವರನ್ನು ಆಗ್ರಹಿಸಿದೆ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಜುಲೈ 7ರಂದು ಪ್ರಧಾನಿ ಕಚೇರಿಗೆ ನೋಂದಾಯಿತ ಅಂಚೆ ಮೂಲಕ ದೂರು ರವಾನಿಸಿದ್ದರು. ಜುಲೈ 13ರಂದು ದೂರು ಪ್ರಧಾನಿ ಕಚೇರಿಯನ್ನು ತಲುಪಿತ್ತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೂ ದೂರು ಕಳುಹಿಸಿದ್ದರು. ಮುಖ್ಯಮಂತ್ರಿ, ಗುತ್ತಿಗೆ ಕಾಮಗಾರಿಗಳು ನಡೆಯುತ್ತಿರುವ ಇಲಾಖೆಯ ನೇತೃತ್ವ ವಹಿಸಿರುವ ಸಚಿವರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯದ ಎಲ್ಲ ಶಾಸಕರಿಗೂ ಸಂಘದಿಂದಲೇ ಪತ್ರ ಬರೆದು, ಲಂಚದ ಹಾವಳಿ ತಡೆಗೆ ಒತ್ತಾಯಿಸಲಾಗಿತ್ತು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಗುರುವಾರ ಭೇಟಿಮಾಡಿದ ಸಂಘದ ಪದಾಧಿಕಾರಿಗಳು, ರಾಜ್ಯ ಸರ್ಕಾರದ ವಿವಿಧ ಕಾಮಗಾರಿಗಳ ಗುತ್ತಿಗೆಯಲ್ಲಿ ನಡೆಯುತ್ತಿರುವ ಲಂಚಾವತಾರಕ್ಕೆ ಕಡಿವಾಣ ಹಾಕುವಂತೆ ಮನವಿ ಸಲ್ಲಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700