ಮಧುಗಿರಿ: ವಿದ್ಯಾರ್ಥಿಗಳು ದೇಶದ ನಿಜವಾದ ಭವಿಷ್ಯ, ಅಬ್ದುಲ್ ಕಲಾಂ ಸೇರಿದಂತೆ ಮಹನೀಯರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ಸು ಗಳಿಸಿ ತುಮಕೂರು ಶ್ರೀ ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಎಂ ಜಿ ಎಂ ಶಾಲೆಯಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಹಾಲಪ್ಪ ಪ್ರತಿಷ್ಠಾನ ವತಿಯಿಂದ ಸರ್ಕಾರಿ ಶಾಲೆಗಳ ಉನ್ನತಿಕರಣ ಹಾಗೂ ಶಾಲಾ ಪೀಠೋಪಕರಣಗಳು ಮತ್ತು ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆ ಜೀವನದ ಅತ್ಯಂತ ಶ್ರೇಷ್ಠ ಘಟ್ಟ. ಜೀವನದಲ್ಲಿ ಅರ್ಥಹೀನವಾಗಿ ಕಳೆದ ಸಮಯ ಅತ್ಯಮೂಲ್ಯ ಕಾಲಘಟ್ಟದ ನಷ್ಟ. ಸಮಯ ಎಲ್ಲಕ್ಕಿಂತ ಶ್ರೇಷ್ಠ. ದೇವರು ಎಲ್ಲರಿಗೂ ಕೊಟ್ಟ ಶ್ರೇಷ್ಠ ಸಂಪನ್ಮೂಲ ಸಮಯ. ಇಂದು ಒಂದು ಉತ್ತಮ ಶಾಲೆ ತೆರೆದರೆ ನಾಳೆ ನೂರು ಜೈಲುಗಳನ್ನು ಮುಚ್ಚಬಹುದು. ಶಿಕ್ಷಕರು ಮಕ್ಕಳಿಗೆ ನೈತಿಕತೆಯ ಚೌಕಟ್ಟಿನಲ್ಲಿ ಸುಂದರವಾದ ಪರಿಸರವನ್ನು ಪರಿಚಯಿಸಬೇಕಿದೆ ಎಂದರು.
ರಾಷ್ಟ್ರ ಕವಿ ಕುವೆಂಪು ರಾಮಕೃಷ್ಣ ಆಶ್ರಮದ ಶಿಶು ಮತ್ತು ಹಳೇಯ ವಿದ್ಯಾರ್ಥಿ. ಅವರಿಗೆ ಜ್ಞಾನ ಪೀಠ ಪ್ರಶಸ್ತಿ ಬಂದಾಗ ಆಶ್ರಮವನ್ನು ಸ್ಮರಿಸಿ ಸ್ವೀಕರಿಸಿದರು ಎಂದು ಸ್ಮರಿಸಿದ ಅವರು, ಮಧುಗಿರಿಗೆ ಎಂ.ಜಿ.ಎಂ. ಶಾಲೆ ಮೈಸೂರಿನ ಮಹಾರಾಣಿ ಶಾಲೆಯಂತೆ ಮಾದರಿಯಾಗಿದೆ. ಮುರಳೀಧರ ಹಾಲಪ್ಪನವರು ಉತ್ತಮ ಕೆಲಸ ಮಾಡುತ್ತಿದ್ದು, ಇದು ಇತರರಿಗೆ ಪ್ರೇರಣೆಯಾಗಲಿ ಎಂದರು.
ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಅವಕಾಶಗಳಿವೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರು ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸರ್ಕಾರದ ವತಿಯಿಂದ ಇಂದು ಆಂಗ್ಲ ಮಾದ್ಯಮ ಆರಂಬಿಸಿ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಪೀಟೋಪಕರಣಗಳು ಮತ್ತು ಇತರೆ ಕ್ರೀಡಾ ಸಾಮಗ್ರಿಗಳ ಕೊರತೆ ಕಂಡು ಬರುತ್ತಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಪೋಷಕರು ತಮ್ಮ ಮಕ್ಕಳ ಬಗ್ಗೆ ಹಲವಾರು ಕನಸುಗಳನ್ನು ಕಂಡಿದ್ದು, ಪೋಷಕರ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪಣತೊಡಬೇಕು.ಹಣ ಇರುವವರೆಲ್ಲಾ ದಾನಿಗಳಲ್ಲ. ಉಳ್ಳವರು ಬಡವರಿಗೆ ದೀನ-ದಲಿತರಿಗೆ ಮಾನವೀಯತೆಯ ರೂಪದಲ್ಲಿ ಸಹಾಯಹಸ್ತ ಚಾಚಬೇಕು ಇದನ್ನು ಮನಗಂಡು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಹಾಲಪ್ಪ ಪ್ರತಿಷ್ಠಾನ ಹಾಗೂ ಶ್ರೀ ಸತ್ಯಸಾಯಿ ಟ್ರಸ್ಟ್ ವತಿಯಿಂದ ಪೀಟೋಪಕರಣಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಶನ್ ಕಾರ್ಯದರ್ಶಿ ಮನ್ಸೂರ್ ಅಹಮದ್, ಎಂ.ಜಿ.ಎಂ ಶಾಲೆಯ ಅಧ್ಯಕ್ಷ ಡಿ.ಜಿ. ಶಂಕರನಾರಾಯಣ ಶೆಟ್ಟಿ, ಕಾರ್ಯದರ್ಶಿ ಎಂ.ಎಸ್. ಶಂಕರನಾರಾಯಣ್, ಧಾರ್ಮಿಕ ಮುಖಂಡ ಎಂ.ಜಿ. ಶೀನಿವಾಸ ಮೂರ್ತಿ, ಫ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ. ವೆಂಕಟರಾಮು , ಬಿಇಓ ನಂಜುಂಡಯ್ಯ, ಸಂದೀಪ್ ನಾರಾಯಣ್, ಸಮಾಜ ಸೇವಕರಾದ ರಿಜ್ವಾನ್ ಪಾಷ ಹಾಜರಿದ್ದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy