ತಿಪಟೂರು: ತಾಲ್ಲೂಕಿನ ಹರಚನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಿರಿಧಾನ್ಯ ಬೇಸಾಯದ ರೈತಕ್ಷೇತ್ರ ಪಾಠಶಾಲೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೃಷಿ ಅಧಿಕಾರಿ ಕಿರಣ್, ಸಿರಿಧಾನ್ಯಗಳಾದ ನವಣೆ, ಸಾವೆ, ಹಾರಕ, ಊದಲು, ಕೊರಲೆ ಹಾಗೂ ಬರಗು ಸೇವನೆಯಿಂದ ಮನುಷ್ಯನ ಆಯುಷ್ಯ ಹಾಗೂ ಆರೋಗ್ಯ ಹೆಚ್ಚಾಗುವ ಕಾರಣ ಪ್ರತಿಯೊಬ್ಬರು ಸಿರಿಧಾನ್ಯವನ್ನು ಬೆಳೆದು ಬಳಸುವಂತಾಗಬೇಕೆಂದು ತಿಳಿಸಿದರು.
ಸಿರಿಧಾನ್ಯ ಬೆಳೆಗಾರರ ಉತ್ತೇಜನಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗ್ರಾಮಮಟ್ಟದಲ್ಲಿ ರೈತರನ್ನು ಒಟ್ಟುಗೂಡಿಸಿ ಸಿರಿಧಾನ್ಯ ಬೆಳೆಗಳ ಉಪಯೋಗಗಳ ಬಗ್ಗೆ ಉಚಿತ ಮಾಹಿತಿ ತರಬೇತುಗಳನ್ನು ಕೊಡಿಸುವುದಲ್ಲದೇ, ಉಚಿತ ಸಿರಿ ಅದ್ಯಯನ ಪ್ರವಾಸಗಳನ್ನು ಏರ್ಪಡಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದು.
ಇಷ್ಟಲ್ಲದೇ ಕೃಷಿ ಇಲಾಖೆಯ ವತಿಯಿಂದ 1 ಎಕರೆಯಿಂದ 2.5 ಎಕರೆಯಷ್ಟು ಸಿರಿದಾನ್ಯ ಬೆಳೆಯುವ ರೈತನೋರ್ವನಿಗೆ ಕನಿಷ್ಟ 4 ಸಾವಿರದಿಂದ ಗರಿಷ್ಟ 10 ಸಾವಿರದವರೆಗೆ ಪ್ರೋತ್ಸಾಹಧನ ಸಿಗುತ್ತದೆಂದು ತಿಳಿಸಿದರು.
ಬಳಿಕ ಮಾತನಾಡಿದ ತಾಲ್ಲೂಕು ಯೋಜನಾಧಿಕಾರಿ ಕೆ.ಉದಯ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯದ ರೈತರ ಅಭ್ಯುದಯಕ್ಕೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಿರಿಧಾನ್ಯ ಬೇಸಾಯ, ಕೃಷಿ ಯಾಂತ್ರೀಕರಣ, ಕೃಷಿ ಸ್ವ ಉದ್ಯೋಗ, ಮಣ್ಣು ಪರೀಕ್ಷೆ, ನೆಲ ಜಲ ಸಂರಕ್ಷಣೆ ಹಾಗೂ ಕೃಷಿ ಅಧ್ಯಯನ ಪ್ರವಾಸ ಹೀಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಎಲ್ಲಾ ರೈತರು ಇವುಗಳ ಉಪಯೋಗಗಳನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಇಷ್ಟಲ್ಲದೇ ಪ್ರಸ್ತುತ ವರ್ಷದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹರಚನಹಳ್ಳಿ ಗ್ರಾಮವನ್ನು ಸಿರಿಗ್ರಾಮವನ್ನಾಗಿ ಪರಿವರ್ತಿಸಲು ಪಣತೊಟ್ಟಿದ್ದು ಗ್ರಾಮದ ಎಲ್ಲಾ ರೈತರು ಸಹಕರಿಸಿ ಹೆಚ್ಚು ಹೆಚ್ಚು ಸಿರಿಧಾನ್ಯಗಳನ್ನು ಬೆಳೆದು ಗ್ರಾಮಾಭಿವೃದ್ಧಿ ಯೋಜನೆಯ ಹಾಗೂ ಸರಕಾರದ ವತಿಯಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿಕೊಂಡರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ರೈತರಾದ ಪರಮೇಶ್ವರಯ್ಯ, ನಾಗರಾಜು, ತಿಮ್ಮೇಗೌಡ, ಉಮಾಪತಿ, ಯೋಜನೆಯ ತಾಲ್ಲೂಕು ಕೃಷಿ ಅಧಿಕಾರಿ ಪ್ರಮೋದ್ ಕುಮಾರ್, ಒಕ್ಕೂಟ ಅಧ್ಯಕ್ಷರಾದ ಲತ ಸೇವಾಪ್ರತಿನಿಧಿ ಲಲಿತ, ಹರಚನಹಳ್ಳಿ ಹಾಗೂ ವಾಸುದೇವರಹಳ್ಳಿ ರೈತಾಪಿ ವರ್ಗದವರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC