ಕೊಳಚೆ ನೀರು ಬಳಸಿ ಬೆಳೆಯಲಾಗುತ್ತಿರುವ ತರಕಾರಿಗಳಲ್ಲಿ ಭಾರ ಲೋಹದ ಸಾಂದ್ರತೆ ಹೆಚ್ಚಾಗಿದ್ದು, ಇಂಥ ತರಕಾರಿ ತಿನ್ನುವುದರಿಂದ ಮಾನವನ ದೇಹಕ್ಕೆ ವಿಷಕಾರಿ ಅಂಶ ಸೇರ್ಪಡೆಯಾಗುವ ಅಪಾಯವನ್ನು ಹೆಚ್ಚಿಸಿದೆ ಎಂದು ಅರಣ್ಯ ಇಲಾಖೆಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಅಧ್ಯಯನ ತಿಳಿಸಿದೆ.
ವಿವಿಧ ಭಾಗಗಳಲ್ಲಿರುವ ಮಾರುಕಟ್ಟೆ, ಸೂಪರ್ ಮಾರುಕಟ್ಟೆ ಮಳಿಗೆಗಳು, ಹಾಪ್ ಕಾಮ್ಸ್, ಸಾವಯವ ಮಳಿಗೆಗಳಿಂದ 10 ತರಕಾರಿಗಳ 400 ಮಾದರಿಗಳನ್ನು ಸಂಗ್ರಹಿಸಿ ಎಂಪ್ರಿ ಅಧ್ಯಯನ ನಡೆಸಿದೆ.
ಬೆಂಗಳೂರು ನಗರದ ಮಾರುಕಟ್ಟೆಗಳಲ್ಲಿ ಲಭ್ಯವಿರುವ ತರಕಾರಿಗಳಲ್ಲಿ ಭಾರ ಲೋಹಗಳ ಸಾಂದ್ರತೆ ಅಧ್ಯಯನ’ ಎಂಬ ವರದಿಯನ್ನು ಎಂಪ್ರಿ 2022ರ ನವೆಂಬರ್‌ನಲ್ಲಿ ಪ್ರಕಟಿಸಿದೆ. ಡಾ. ಎನ್. ಹೇಮಾ, ಪಿ.ಬಿ. ಐಶ್ವರ್ಯ, ಡಿ.ಆರ್. ದಿವ್ಯಾ ಅವರು ಈ ಅಧ್ಯಯನದ ನೇತೃತ್ವ ವಹಿಸಿದ್ದರು.
ಬದನೆಕಾಯಿ, ಟೊಮೆಟೊ, ದೊಡ್ಡ ಮೆಣಸಿನಕಾಯಿ, ಬೀನ್ಸ್, ಕ್ಯಾರಟ್, ಹಸಿ ಮೆಣಸಿನಕಾಯಿ, ಈರುಳ್ಳಿ, ಆಲೂಗಡ್ಡೆ, ಪಾಲಕ್ ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಮಾರುಕಟ್ಟೆಗಳಿಂದ ಸಂಗ್ರಹಿಸಲಾಗಿದೆ. ನುವಾನ್- ಅಲ್ಪಾ ಮೈಕ್ರೋವೇವ್ ಡೈಜೆಷನ್ ಎಕ್ಸ್ ಟ್ರಾಕ್ಷನ್ ಸಿಸ್ಟಮ್ ನಲ್ಲಿ ಪೂರ್ವ-ಚಾಲಿತ ಪ್ರೋಗ್ರಾಂ ಮೂಲಕ ಈ ತರಕಾರಿಗಳಲ್ಲಿ ಭಾರ ಲೋಹಗಳಿರುವುದನ್ನು ಪತ್ತೆಹಚ್ಚಲಾಗಿದೆ.


