ಹಿರಿಯೂರು: ಹಿಜಾಬ್ ಧರಿಸಲು ಅವಕಾಶ ನೀಡಿದರೆ ಮಾತ್ರ ಪರೀಕ್ಷೆ ಬರೆಯುವುದಾಗಿ ನಗರದ ಪ್ರಧಾನ ರಸ್ತೆಯಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದು, ಪರೀಕ್ಷೆ ಬರೆಯದೇ ವಾಪಸ್ ತೆರಳಿದ ಘಟನೆ ನಡೆದಿದೆ.
ಹಿರಿಯೂರು ನಗರದ ಜೂನಿಯರ್ ಕಾಲೇಜ್ ಮುಂಭಾಗದಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿವರ್ಗ ಕಾಲೇಜು ಗೇಟಿನ ಮುಂಭಾಗದಲ್ಲೇ ತಡೆಯೊಡ್ಡಿದರು. ಈ ವೇಳೆ ವಿದ್ಯಾರ್ಥಿನಿಯರು ಹಾಗೂ ಕಾಲೇಜು ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.
ರಾಜ್ಯ ಹೈಕೋರ್ಟ್ ಆದೇಶವನ್ನು ನಾವೆಲ್ಲಾ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಆದ್ದರಿಂದ ಹೈಕೋರ್ಟ್ ಅಂತಿಮ ಆದೇಶ ಬರುವವರೆಗೆ ಶಾಂತಿಯಿಂದಿರಿ, ಈಗ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಿಜಾಬ್ ತೆಗೆದು ಹೋಗಿ ಪರೀಕ್ಷೆ ಬರೆಯಿರಿ ಎಂದು ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ಪೋಲೀಸ್ ಅಧಿಕಾರಿಗಳು ವಿದ್ಯಾರ್ಥಿ ಹಾಗೂ ಪೋಷಕರರಲ್ಲಿ ಮನವಿ ಮಾಡಿದರು.
ಆದರೆ ಇದಕ್ಕೆ ಒಪ್ಪದ ವಿದ್ಯಾರ್ಥಿಗಳು ಹಾಗೂ ಪೋಷಕರು ನಮಗೆ ಧರ್ಮವೇ ಮುಖ್ಯ, ನಾವು ಸತ್ತಾಗ ನಮ್ಮ ಹಿಂದೆ ಧರ್ಮ ಬರುತ್ತದೆಯೇ ಹೊರತು ಯಾವ ವಿದ್ಯೆಯೂ ಬರುವುದಿಲ್ಲ, ಎಂಬುದಾಗಿ ಉತ್ತರಿಸಿದರಲ್ಲದೆ, ನಮಗೆ ಹಿಜಾಬ್ ಧರಿಸಲು ಅವಕಾಶ ನೀಡಿದರೆ ಮಾತ್ರ ಪರೀಕ್ಷೆ ಬರೆಯುವುದಾಗಿ ಹೇಳಿ, ಪರೀಕ್ಷೆ ಬರೆಯದೇ ತಮ್ಮ ತಮ್ಮ ಮನೆಗಳಿಗೆ ಪೋಷಕರ ಜೊತೆ ಹಿಂದಿರುಗಿದರು.
ಆರಂಭದಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದಾರೆ. ಅವರನ್ನು ಪ್ರತ್ಯೇಕ ಕೋಣೆಯಲ್ಲಿ ಕುಳ್ಳಿರಿಸಿದ ಪ್ರಾಂಶುಪಾಲ ರಾಮಚಂದ್ರಪ್ಪನವರು ಹೈಕೋರ್ಟ್ ಆದೇಶದಂತೆ ಹಿಜಾಬ್ ತೆಗೆದು ಪರೀಕ್ಷಾ ಕೊಠಡಿಗೆ ತೆರಳಿ ಪರೀಕ್ಷೆ ಬರೆಯುವಂತೆ ಸೂಚಿಸಿದ್ದಾರೆ. ಇವರ ಮನವಿಗೆ ಸ್ಪಂದಿಸಿದ ಕೆಲವು ವಿದ್ಯಾರ್ಥಿಗಳು ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ತೆರಳಿದರೆ, ಕೆಲವು ವಿದ್ಯಾರ್ಥಿನಿಯರು ನಾವು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುವುದಾಗಿ ಪಟ್ಟು ಹಿಡಿದ ಸಂದರ್ಭದಲ್ಲಿ ಈ ಪ್ರಸಂಗ ನಡೆದಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಹಿರಿಯೂರು ನಗರದ ನಗರಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್ ವಿ. ಹಾಗೂ ಪಿ.ಎಸ್.ಐ ಅನುಸೂಯಮ್ಮ, ಸಿಬ್ಬಂದಿವರ್ಗ ಕಾಲೇಜಿನ ಮುಂಭಾಗದ ಗೇಟಿನ ಬಳಿ ಮೊಕ್ಕಾಂ ಹೂಡಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.
ಸುದ್ದಿ ತಿಳಿದ ತಕ್ಷಣ ಡಿವೈಎಸ್ಪಿ ರೋಷನ್ ಜಮೀರ್ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಸೇರಿದಂತೆ ಮುಸ್ಲಿಂ ಮುಖಂಡರುಗಳು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ವರದಿ: ಮುರುಳಿಧರನ್ ಆರ್. ಹಿರಿಯೂರು (ಚಿತ್ರದುರ್ಗ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy