ಪಾವಗಡ: ಗಡಿ ಹಾಗೂ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಪಾವಗಡ ತಾಲ್ಲೂಕಿನಲ್ಲಿ, ಸಂಕಷ್ಟದಲ್ಲಿರುವವರ ಪಾಲಿಗೆ ಹೆಲ್ಪ್ ಸೊಸೈಟಿ ಸಂಸ್ಥೆಯು ‘ಬರದ ನಾಡಿನ ಭಗೀರಥ’ನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಲೋಕೇಶ್ ಪಾಳೇಗಾರ್ ಬಣ್ಣಿಸಿದರು.
ತಾಲ್ಲೂಕಿನ ಕರಿಯಮ್ಮನಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಹೆಲ್ಪ್ ಸೊಸೈಟಿ ವತಿಯಿಂದ ಏರ್ಪಡಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಫ್ಲೋರೇಡ್ ಮುಕ್ತ ಆರೋಗ್ಯಕರ ಸಮಾಜದತ್ತ ಹೆಜ್ಜೆ: ಆರೋಗ್ಯ, ಉದ್ಯೋಗ, ಸರ್ಕಾರಿ ಶಾಲೆಗಳ ಸಬಲೀಕರಣ, ಬಡತನ ನಿರ್ಮೂಲನೆ ಹಾಗೂ ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಹೆಲ್ಪ್ ಸೊಸೈಟಿ ಸದಾ ಮುಂಚೂಣಿಯಲ್ಲಿದೆ. ತಾಲ್ಲೂಕಿನ ನೀರಿನಲ್ಲಿ ಫ್ಲೋರೇಡ್ ಅಂಶ ಹೆಚ್ಚಾಗಿದ್ದು, ಸಾವಿರಾರು ಜನರು ಹಾಗೂ ಮಕ್ಕಳು ಅಂಗವಿಕಲತೆಯ ಭೀತಿ ಎದುರಿಸುತ್ತಿದ್ದಾರೆ. ಇದನ್ನು ಮನಗಂಡು ಶಾಲೆಗಳಿಗೆ ಶುದ್ಧ ನೀರಿನ ಘಟಕಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
“ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ಹೆಲ್ಪ್ ಸೊಸೈಟಿಯ ಕಾರ್ಯವೈಖರಿ ತಾಲ್ಲೂಕಿನ ಅಭಿವೃದ್ಧಿಗೆ ಪೂರಕವಾಗಿದೆ.”
– ಲೋಕೇಶ್ ಪಾಳೇಗಾರ್
ಅಭಿವೃದ್ಧಿಗೆ ಸದಾ ಸಿದ್ಧ: ಮಾನಂ ಶಶಿ ಕಿರಣ್
ಘಟಕವನ್ನು ವಿತರಿಸಿ ಮಾತನಾಡಿದ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿ ಕಿರಣ್, “ತಾಲ್ಲೂಕಿನ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಸಂಸ್ಥೆಯ ವತಿಯಿಂದ ಕೈಲಾದ ಸಹಾಯ ಮತ್ತು ಸಹಕಾರವನ್ನು ಮುಂಬರುವ ದಿನಗಳಲ್ಲೂ ಮುಂದುವರಿಸಲಾಗುವುದು,” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಅವಿಲೇನಿ ನರೇಶ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಆದಿಲಕ್ಷ್ಮೀ, ಮುಖ್ಯ ಶಿಕ್ಷಕಿ ಭಾರತಿ ಪಾಳೇಗಾರ್, ಓಂಕಾರ ನಾಯಕ, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್, ಮಾಜಿ ಗ್ರಾ.ಪಂ ಸದಸ್ಯರಾದ ಅಂಜನನಾಯಕ ಕೆ., ಗೋಪಾಲ್, ರಮೇಶ್ ಹಾಗೂ ಗಣ್ಯರಾದ ಅಂಜನಾಯಕ, ಮಹಾಲಿಂಗ ನಾಯಕ, ಧನು, ಹನುಮಂತರಾಯಪ್ಪ, ಪದ್ಮ, ಕಮಲಾಕ್ಷಿ, ರಾಜಕುಮಾರ, ಅಂಗನವಾಡಿ ಕಾರ್ಯಕರ್ತೆ ರಂಗಮ್ಮ ಮತ್ತು ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


