ಕಲಬುರಗಿ: ಒಂದೇ ಸೀರೆ ಸುತ್ತಿಕೊಂಡು ತಾಯಿ, ಮಗಳು ನದಿಗೆ ಹಾರಿ ಪ್ರಾಣ ಕಳೆದುಕೊಂಡ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನಲ್ಲಿ ನಡೆದಿದೆ. ಅಫಜಲಪುರ ತಾಲೂಕಿನ ನಿಲೂರ ಗ್ರಾಮದ ನಿವಾಸಿಗಳಾದ ಸುಮಲತಾ(41) ಮತ್ತು ಮಗಳು ವರ್ಷಾ(17) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಮೇಲ್ನೋಟಕ್ಕೆ ಉತ್ತಮ ಕುಟುಂಬ ಮತ್ತು ಮಧ್ಯಮ ವರ್ಗಕ್ಕೆ ಸೇರಿದಂತೆ ಕಾಣುವ ಈ ತಾಯಿ ಮಗಳು ಯಾವುದೇ ಮಾನಸಿಕ ವೇದನೆಯಿಂದ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ತಾಯಿ ಮತ್ತು ಮಗಳು ಒಂದೇ ಸೀರೆಯನ್ನು ಕಟ್ಟಿಕೊಂಡು ಕಾಗಿಣ ನದಿಗೆ ಹಾರಿದ್ದಾರೆ. ನೀರಿಗೆ ಹಾರಿದ ಸಂದರ್ಭದಲ್ಲಿ ಯಾರಾದರೂ ಕೊನೆಯ ಹಂತದಲ್ಲಿ ಬದುಕಿಕೊಳ್ಳಲು ಪ್ರಯತ್ನ ನಡೆಸಬಾರದು ಎಂಬ ಕಾರಣಕ್ಕೆ ಈ ರೀತಿ ಕಟ್ಟಿಕೊಂಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಶಹಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


