ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದ ಮಧ್ಯಭಾಗದಲ್ಲಿ ಸಭೆ, ಸಮಾರಂಭಗಳು, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಪುರಭವನವನ್ನು ಕೆಡವಿ, ಸುಮಾರು 5 ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ನಗರಸಭೆ ಕಟ್ಟಡ ನಿರ್ಮಿಸಲಾಗಿದ್ದು, ಈ ಕೆಲಸ ಪೂರ್ಣಗೊಂಡಿದ್ದರೂ, ಈ ಕಟ್ಟಡ ಉದ್ಘಾಟನಾ ಭಾಗ್ಯ ಕಂಡಿರುವುದಿಲ್ಲ, ಇದನ್ನು ಆದಷ್ಟು ಬೇಗ ಉದ್ಘಾಟಿಸಬೇಕು ಎಂಬುದಾಗಿ ರೈತಸಂಘದ ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಮನವಿ ಮಾಡಿದರು.
ಹಿರಿಯೂರು ನಗರದ ನಗರಸಭೆ ಆವರಣದಲ್ಲಿ ರಾಜ್ಯ ರೈತಸಂಘದ ನೇತೃತ್ವದಲ್ಲಿ ನೂತನ ನಗರಸಭಾ ಕಾರ್ಯಾಲಯವನ್ನು ಉದ್ಘಾಟನೆ ಮಾಡುವಂತೆ ಒತ್ತಾಯಿಸಿ, ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರ ಮೂಲಕ ಪೌರಾಡಳಿತ ಸಚಿವರಾದ ಎಂ.ಟಿ.ಬಿ.ನಾಗರಾಜ್ ರವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನಮ್ಮ ತುಮಕೂರು ಮಾಧ್ಯಮದ ಮೂಲಕ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆ ಸಿ ಹೊರಕೇರಪ್ಪ, ಈ ನೂತನ ಕಟ್ಟಡ ಉದ್ಘಾಟನೆಗೆ ಪೀಠೋಪಕರಣಗಳು ಹಾಗೂ ಲಿಫ್ಟ್ ಅಳವಡಿಸುವ ಸಬೂಬು ಹೇಳುತ್ತಾ, ಕಾಲಹರಣ ಮಾಡುತ್ತಿರುವ ಅಧಿಕಾರಿಗಳ ನಡೆ ನಾಗರಿಕರಲ್ಲಿ ಅನುಮಾನ ಮೂಡಿಸುತ್ತಿದ್ದು, ನಗರಸಭೆ ಆಡಳಿತ ಮಂಡಳಿ ಹಾಗೂ ತಾಲ್ಲೂಕಿನ ಜನಪ್ರತಿನಿಧಿಗಳು ನಾಗರೀಕರು ಹಾಗೂ ನಗರಾಭಿವೃದ್ಧಿ ಹಿತದೃಷ್ಟಿಯಿಂದ ಇಚ್ಛಾಶಕ್ತಿ ಪ್ರದರ್ಶಿಸಿ, ನೂತನ ನಗರಸಭಾ ಕಾರ್ಯಾಲಯ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು ಎಂದರು.
ಇನ್ನೂ ಒಂದು ತಿಂಗಳ ಒಳಗಾಗಿ ನಗರಸಭೆ ಕಟ್ಟಡವನ್ನು ಉದ್ಘಾಟನೆ ಮಾಡಿ, ಲೋಕಾರ್ಪಣೆ ಮಾಡದೇ ವಿಳಂಬ ನೀತಿ ಅನುಸರಿಸಿದರೆ, ಕರ್ನಾಟಕರಾಜ್ಯ ರೈತಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಮತ್ತು ಪುರಪಿತೃಗಳ ನೇತೃತ್ವದಲ್ಲಿ ನಗರಸಭೆ ಕಚೇರಿಗೆ ಬೀಗ ಹಾಕಿ ಕಚೇರಿಯ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ರಾಜ್ಯದ ಪೌರಾಡಳಿತ ಸಚಿವರಿಗೆ ಅವರು ಎಚ್ಚರಿಕೆ ನೀಡಿದರು.
ಮುಖಂಡ ಸಿದ್ದಪ್ಪ ಮಾತನಾಡಿ, ಈ ಹಿರಿಯೂರು ನಗರಸಭೆಯ ನೂತನ ಕಟ್ಟಡವು ಐದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಆದರೆ ಉದ್ಘಾಟನೆ ಮಾತ್ರ ಕಾಣಲು ಸಾಧ್ಯವಾಗುತ್ತಿಲ್ಲ . ರೈತ ಸಂಘದಿಂದ ನೀಡಿರುವ ಒಂದು ತಿಂಗಳ ಕಾಲಾವಧಿಯಲ್ಲಿ ಲೋಕಾರ್ಪಣೆ ಮಾಡದೇ ವಿಳಂಬ ನೀತಿ ಅನುಸರಿಸಿದ್ದಲ್ಲಿ ಕರ್ನಾಟಕ ರಾಜ್ಯ ರೈತ ಸಂಘವು ನೀಡಿದಂತಹ ಮನವಿಯಂತೆ ಹಿರಿಯೂರು ನಗರಸಭೆ ಕಛೇರಿಗೆ ಬೀಗ ಹಾಕಿ ಮುಷ್ಕರ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದರು.
ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ರಾಜ್ಯ ರೈರ ಸಂಘದ ಮಹಿಳಾ ಅಧ್ಯಕ್ಷರಾದ ವಿ.ಕಲ್ಪನ ಹಾಗೂ ಇಂದಿರಾ ಗಾಂಧಿ ಅಭಿಮಾನಿ ವೇದಿಕೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ರಂಗಪ್ಪ ಯಾದವ್ ಸಹ ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿ, ಈ ಬೃಹತ್ ಪ್ರತಿಭಟನೆಗೆ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಅಜಯ್ ಕುಮಾರ್, ರೈತಸಂಘದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀಕಾಂತ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಕಲ್ಪನಾ, ಯುವಘಟಕದ ಅಧ್ಯಕ್ಷರಾದ ಚೇತನ್ ಯಳನಾಡು, ರೈತಮುಖಂಡರುಗಳಾದ ಮೇಟಿಕುರ್ಕೆ ತಿಪ್ಪೇಸ್ವಾಮಿ, ಶ್ರೀಮತಿ ತಿಮ್ಮಕ್ಕ, ಪ್ರಭು ಯಾದವ್ ಸಿದ್ದಪ್ಪ ,ವಿ ಎಚ್ ರಾಜು , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಗುರುಪ್ರಸಾದ್ , ದಾದಾಪೀರ್, ಬಿ.ಪಿ.ಉಮಾಪತಿ, ಎಂ.ರಂಗಪ್ಪ ಯಾದವ್, ದೇವರಾಜ್ ಇತರರು ಉಪಸ್ಥಿತರಿದ್ದರು.
ವರದಿ : ಮುರುಳಿಧರನ್ ಆರ್ ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy