ತುಮಕೂರು: ಜಿಲ್ಲೆಯಲ್ಲಿರುವ ಜೇನುತುಪ್ಪ ಉತ್ಪಾದಕರು ಹಾಗೂ ಸಂಗ್ರಾಹಕರು ತೋಟಗಾರಿಕೆ ಇಲಾಖೆಯ ಝೇಂಕಾರ(Jhenkara) ಎಂಬ ಬ್ರ್ಯಾಂಡ್ ಹೆಸರು ಹಾಗೂ ಲೋಗೋ ಬಳಸಿಕೊಂಡು ಜೇನುತುಪ್ಪವನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕಿ ಶಾರದಮ್ಮ ತಿಳಿಸಿದ್ದಾರೆ.
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪಕ್ಕೆ ತೋಟಗಾರಿಕೆ ಇಲಾಖೆಯು ಬ್ರ‍್ಯಾಂಡ್ ಹೆಸರನ್ನು ಅಭಿವೃದ್ಧಿಪಡಿಸಿ TRADE MARK REGISTRY ಇಂದ ಅಧಿಕೃತವಾಗಿ ಅನುಮೋದನೆ ಪಡೆದಿದೆ. ತೋಟಗಾರಿಕೆ ಇಲಾಖೆಯು ಝೇಂಕಾರ್ ಬ್ರ‍್ಯಾಂಡ್ನ ಮಾಲಿಕತ್ವವನ್ನು ಹೊಂದಿದ್ದು, ಜೇನುತುಪ್ಪ ಉತ್ಪಾದಕರು ಮತ್ತು ಸಂಗ್ರಾಹಕರು ಷರತ್ತು ಹಾಗೂ ನಿಬಂಧನೆಗಳೊಂದಿಗೆ ಈ ಬ್ರ್ಯಾಂಡ್ ಹೆಸರು ಮತ್ತು ಲೋಗೋ ಬಳಸಿಕೊಂಡು ಜೇನುತುಪ್ಪ ಮಾರಾಟ ಮಾಡಲು ಅವಕಾಶವಿದೆ.
ತೋಟಗಾರಿಕೆ ಇಲಾಖೆಯ ಮಾಲಿಕತ್ವದ ಈ ಜೇನುತುಪ್ಪ ಬ್ರ್ಯಾಂಡ್ ನಡಿ ಜೇನುತುಪ್ಪ ಮಾರಾಟ ಮಾಡಲಿಚ್ಛಿಸುವ ಜೇನುತುಪ್ಪ ಉತ್ಪಾದಕರು/ಸಂಗ್ರಾಹಕರು 2500 ರೂ.ಗಳ ನೋಂದಣಿ ಶುಲ್ಕವನ್ನು ಖಜಾನೆ-2ರ ಲೆಕ್ಕ ಶೀರ್ಷಿಕೆ(0401–00-800–2–01)ಯಡಿ ಪಾವತಿಸಿ ತೋಟಗಾರಿಕೆ ಉಪ ನಿರ್ದೇಶಕರಿಗೆ ಪಾವತಿಸಿದ ಚಲನ್ ನೀಡಿ ಬ್ರ್ಯಾಂಡ್ ಬಳಸಿ ಜೇನುತುಪ್ಪ ಮಾರಾಟ ಮಾಡಲು ಅನುಮತಿ ಪಡೆಯಬಹುದಾಗಿದೆ.
ಝೇಂಕಾರ್ ಬ್ರ್ಯಾಂಡ್ ಲ್ಲಿ ಮಾರಾಟ ಮಾಡಲಿಚ್ಛಿಸಿದ ಜೇನು ಉತ್ಪಾದಕರು/ಸಂಗ್ರಾಹಕರು AGMARK ಹಾಗೂ FSSAI ಸಂಸ್ಥೆಗಳ ವತಿಯಿಂದ ನೋಂದಣಿ ಹಾಗೂ ಅನುಮೋದನೆ ಪಡೆದು ಮಾರಾಟ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಹಾಗೂ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಚೇರಿಯನ್ನು ಸಂರ್ಪಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx