- ರಾಜೇಶ್ ರಂಗನಾಥ್
ತುಮಕೂರು: ಮುಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ತಾವು ತುಮಕೂರಿನಲ್ಲೇ ಇದ್ದು ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿಳಿಸಿ ಹೊಸ ರಾಜಕಾರಣದ ಸಮೀಕರಣಕ್ಕೆ ನಾಂದಿ ಹಾಡಿದರು.
ಅವರು ತಾಲ್ಲೂಕಿನ ಬಳ್ಳಗೆರೆಯ ಶಾಸಕ ಡಿ.ಸಿ.ಗೌರಿಶಂಕರ್ ರವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ಬಗ್ಗೆ ಅನ್ಯ ಪಕ್ಷದ ರಾಜ್ಯ ಹಾಗೂ ಜಿಲ್ಲಾ ನಾಯಕರುಗಳು ತಮಗಿಚ್ಛೆ ಬಂದಂತೆ ಹೇಳಿಕೆ ನೀಡುತ್ತಿದ್ದು, ಆ ಹೇಳಿಕೆಗಳಿಗೆ ಮತ್ತು ಅವರ ಆರೋಪಗಳಿಗೆ ಯಾವುದೇ ಮನ್ನಣೆ ನೀಡುವುದಿಲ್ಲ. ತಮಗೆ ಪಕ್ಷ ಸಂಘಟನೆ ಮಾಡುವ ಗುರಿ ಮುಂದಿದ್ದು, ಅದಕ್ಕಾಗಿ ರಾಜ್ಯವ್ಯಾಪಿ ಪ್ರವಾಸ ಮಾಡಿ ಮಾಡಿಯೇ ತೀರುತ್ತೇನೆ. ನಾನು ಕಳೆದ ಬಾರಿ ಲೋಕಸಭೆಯಲ್ಲಿಯೇ ಇನ್ನು ಮುಂದೆ ಚುನಾವಣೆಗೆ ಸ್ಫರ್ಧಿಸುವುದಿಲ್ಲ ಎಂದು ಭಾಷಣ ಮಾಡಿ ಹೊರಬಂದಿದ್ದೆ. ಆದರೆ ಅಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೇ ನನ್ನನ್ನು ತುಮಕೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಆಹ್ವಾನ ನೀಡಿ ಕರೆತಂದರು. ಇಲ್ಲಿಯ ಸಂಸದರಾಗಿದ್ದ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸುವ ಉದ್ದೇಶ ನನ್ನದಾಗಿರಲಿಲ್ಲ ಎಂದು ತಿಳಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಪಕ್ಷದ ವತಿಯಿಂದ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಮಾತ್ರ ಹಾಕಿದ್ದು, ಉಳಿದ ಕ್ಷೇತ್ರಗಳಲ್ಲಿ ಯಾರಿಗೆ ಬೆಂಬಲ ನೀಡಬೇಕೆಂಬುದರ ಬಗ್ಗೆ ಭಾನುವಾರ ಕುಮಾರಸ್ವಾಮಿಯವರು ತಿಳಿಸಲಿದ್ದಾರೆ ಎಂದರು.
ಕೆ.ಎನ್.ರಾಜಣ್ಣನವರ ವಿರುದ್ಧ ವಗ್ದಾಳಿ ನಡೆಸಿದ ದೇವೇಗೌಡರು, ತಮ್ಮಿಂದ ರಾಜಣ್ಣನವರಿಗೆ ಯಾವುದೇ ಅನ್ಯಾಯವಾಗಿಲ್ಲ. ಹಿಂದೆ ಚುನಾವಣೆಯಲ್ಲಿ ಅವರ ಪರವಾಗಿ ಬಂದು ಪ್ರಚಾರ ಮಾಡಿ ಅವರನ್ನು ಗೆಲ್ಲಿಸಿದ್ದೆ. ಅವರು ಈಗ ತಮ್ಮ ವಿರುದ್ಧ ಮಾತನಾಡಿದ್ದು, ಕಾಲವೇ ಎಲ್ಲದಕ್ಕು ಉತ್ತರ ನೀಡಲಿದೆ. ತುಮಕೂರು ವಿ.ಪ. ಚುನಾವಣೆಗೆ ರಾಜಣ್ಣನವರ ಸಮುದಾಯದ ಅಭ್ಯರ್ಥಿಗೆ ಜೆಡಿಎಸ್ ನಿಂದ ಟಿಕೆಟ್ ನೀಡಿದ್ದು ತಾವು ಜಾತಿ ಸಮೀಕರಣದ ಮೇಲೆ ರಾಜಕಾರಣ ಮಾಡಿಲ್ಲ. ಪಕ್ಷದ ಅಭ್ಯರ್ಥಿ ಅನಿಲ್ ಕುಮಾರ್ ಸಮರ್ಥರಿದ್ದು, ಕೆ.ಎ.ಎಸ್. ಅಧಿಕಾರಿಯಾಗಿ ಕೆಲಸ ಮಾಡಿದ್ದು, ಸಾರ್ವಜನಿಕ ಸೇವೆಮಾಡಲು ಮುಂದೆ ಬಂದಿದ್ದಾರೆ. ಅವರಿಗೆ ಪಕ್ಷ ಅವಕಾಶ ನೀಡಿದ್ದು ಅವರ ಗೆಲುವು ನಿಶ್ಚಿತ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್, ಜೆಡಿಎಸ್ ಮುಖಂಡರಾದ ಫಾಲನೇತ್ರಯ್ಯ, ಟಿ.ಆರ್. ನಾಗರಾಜು, ಹಾಲನೂರು ಅನಂತ್, ಸಿರಾಕ್ ರವೀಶ್, ಮುಂತಾದವರು ಉಪಸ್ಥಿತರಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700