ಭಾರತವು ಅನೇಕ ವಿಚಿತ್ರ ಮತ್ತು ನಿಗೂಢ ದೇವಾಲಯಗಳ ತವರೂರು. ಕೆಲ ದೇವಾಲಯಗಳಲ್ಲಿ ವಿಚಿತ್ರ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹೆಚ್ಚಿನ ಜನರು ಈ ದೇವಾಲಯಗಳಿಗೆ ವಿವಿಧ ರೀತಿಯ ವಸ್ತುಗಳನ್ನು ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಇಷ್ಟಾರ್ಥಗಳು ಈಡೇರುತ್ತವೆಂದು ಅವರು ನಂಬಿದ್ದಾರೆ. ಹೀಗಾಗಿ ಚಿತ್ರ-ವಿಚಿತ್ರ ಸಂಪ್ರದಾಯಗಳನ್ನು ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದಾರೆ.
ಇಂದು ನಾವು ನಿಮಗೆ ಮಧ್ಯಪ್ರದೇಶ(Madhya Pradesh)ದ ಮಂದಸೌರ್‌ನಲ್ಲಿರುವ ಅಂತಹ ವಿಚಿತ್ರ ದೇವಾಲಯದ ಬಗ್ಗೆ ತಿಳಿಸುತ್ತೇವೆ. ಇದು ತುಂಬಾ ವಿಚಿತ್ರ ಸಂಪ್ರದಾಯ ಹೊಂದಿರುವ ದೇವಸ್ಥಾನವಾಗಿದೆ. ಏಕೆಂದರೆ ಈ ದೇವಾಲಯದಲ್ಲಿ ಯಾವುದೇ ದೇವತೆ ಅಥವಾ ಯಾವುದೇ ಪಂಡಿತ-ಪುರೋಹಿತರು ಕುಳಿತುಕೊಳ್ಳುವುದಿಲ್ಲ. ಆದರೂ ಜನರು ಇಲ್ಲಿಗೆ ಬಂದು ತಲೆಬಾಗಿ ನಮಿಸುತ್ತಾ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಈ ದೇವಾಲಯದ ಹೆಸರು ಸಾಗಸ್ ಬಾವ್ಜಿ ದೇವಾಲಯ(Sagas bavji Hindu Temple).ದಾರಿ ತಪ್ಪಿದ ಜನರಿಗೆ ದಾರಿ ತೋರುವ ದೇವರು
ಸಾಗಸ್ ಬಾವ್ಜಿ(Sagas bavji) ಎಂದರೆ ಯಕ್ಷ. ಸಾಗಸ್ ಬಾವ್ಜಿಯನ್ನು ಧರ್ಮಗ್ರಂಥಗಳಲ್ಲಿ ಯಕ್ಷ ಎಂದು ಕರೆಯಲಾಗಿದೆ ಎಂದು ಸ್ಥಳೀಯ ಜನರು ನಂಬುತ್ತಾರೆ. ಯಕ್ಷನು ಹಣವನ್ನು ಕಾಪಾಡುತ್ತಾರೆಂಬ ನಂಬಿಕೆ ಇಲ್ಲಿದೆ. ಇಲ್ಲಿ ಯಕ್ಷರು ಶಾರೀರಿಕ ರೂಪದಲ್ಲಿ ಕಾಣಿಸಿಕೊಂಡು ದಾರಿ ತಪ್ಪಿದ ಜನರಿಗೆ ದಾರಿ ತೋರಿಸುತ್ತಾರೆ ಎನ್ನುತ್ತಾರೆ ಇಲ್ಲಿನ ಜನ. ಆದ್ದರಿಂದಲೇ ದೂರದೂರುಗಳಿಂದ ಇಲ್ಲಿಗೆ ಬರುವ ಜನರಿಗೆ ಸರಿಯಾದ ದಿಕ್ಕು ಸಿಗುತ್ತದೆ ಮತ್ತು ಜೀವನದ ದುಃಖಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.
ಉಡುಗೊರೆಯಾಗಿ ಕೈಗಡಿಯಾರ ನೀಡುವ ಜನರು
ಈ ದೇವಾಲಯ(Sagas Bavji Temple)ಕ್ಕೆ ಸಂಬಂಧಿಸಿದ ಕುತೂಹಲಕಾರಿ ಸಂಗತಿಗಳು ಇಲ್ಲಿಗೇ ಮುಗಿಯುವುದಿಲ್ಲ. ಈ ದೇವಾಲಯಕ್ಕೆ ಬರುವ ಭಕ್ತರು ನೀಡುವ ಕಾಣಿಕೆಗಳು ತುಂಬಾ ವಿಚಿತ್ರವಾಗಿವೆ. ಜನರು ಇಲ್ಲಿಗೆ ಬಂದು ಸಾಗಸ್ ಬಾವ್ಜಿಗೆ ಗಡಿಯಾರ ಮತ್ತು ವಾಚ್ ಗಳನ್ನು ಕಾಣಿಕೆಯಾಗಿ ಸಮರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಅವರ ಕೆಟ್ಟ ದಿನಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಸಂತೋಷ ಬರುತ್ತದೆ ಎಂಬ ನಂಬಿಕೆ ಇದೆ. ಈ ದೇವಾಲಯದಲ್ಲಿ ಗಡಿಯಾರಗಳ ರಾಶಿಯೇ ಇರುತ್ತದೆ. ಅಷ್ಟೇ ಅಲ್ಲ ಇಲ್ಲಿಂದ ವಾಚ್ ಕದ್ದೊಯ್ದರೆ ಆ ಸಮಯದಿಂದ ಆತನ ಕೆಟ್ಟ ಕಾಲ ಶುರುವಾಗುತ್ತದೆ ಎಂದೂ ಹೇಳಲಾಗುತ್ತದೆ. ಆದುದರಿಂದಲೇ ಯಾರೂ ಇಲ್ಲಿನ ವಾಚ್ ಗಳನ್ನು ಅಪ್ಪಿತಪ್ಪಿಯೂ ಮನೆಗೆ ತೆಗೆದುಕೊಂಡು ಹೋಗುವುದಿಲ್ಲ.ಗಡಿಯಾರಗಳನ್ನು ನದಿಯಲ್ಲಿ ಎಸೆಯಲಾಗುತ್ತದೆ
ಗಡಿಯಾರಗಳ ರಾಶಿಯಿಂದ ದೇವಾಲಯ(Hindu Temple) ತುಂಬಿದ್ದಾಗ ಅವುಗಳನ್ನು ಹತ್ತಿರದ ನದಿಗೆ ಎಸೆಯಲಾಗುತ್ತದೆ. ಈ ದೇವಾಲಯದಲ್ಲಿ ಗಡಿಯಾರಗಳ ರಾಶಿ ಸಂಗ್ರಹವಾದರೂ ಇಲ್ಲಿ ಎಂದಿಗೂ ಬೀಗ ಹಾಕಲಾಗಿಲ್ಲ. ಒಮ್ಮೆ ಒಬ್ಬ ವ್ಯಕ್ತಿ ಇಲ್ಲಿಂದ 5 ವಾಚ್‌ಗಳನ್ನು ಕದ್ದಿದ್ದನಂತೆ. ನಂತರ ಆತ ತನ್ನ ಕಣ್ಣುಗಳನ್ನೇ ಕಳೆದುಕೊಂಡಿದ್ದನಂತೆ. ಬಳಿಕ ಆತ ದೇವಾಲಯಕ್ಕೆ 10 ವಾಚ್‌ಗಳನ್ನು ಸಮರ್ಪಿಸಿದಾಗ ವಾಪಸ್ ಆತನಿಗೆ ಕಣ್ಣುಗಳು ಬಂದವಂತೆ. ಸಂತಾನ ಭಾಗ್ಯದಿಂದ ಹಿಡಿದು ಕಳೆದುಹೋದ ವಸ್ತುಗಳನ್ನು ವಾಪಸ್ ಪಡೆಯುವವರೆಗೆ ಇಲ್ಲಿನ ದೇವರು ಬೇಡಿಕೊಂಡ ವರವನ್ನು ದಯಪಾಲಿಸುತ್ತಾನೆಂಬ ನಂಬಿಕೆ ಇಲ್ಲಿನ ಜನರಲ್ಲಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB