ವರದಿ: ಹಾದನೂರು ಚಂದ್ರ
ಸರಗೂರು : ರಾಜ್ಯ ಹೆದ್ದಾರಿ ರಸ್ತೆಗೆ ಹೊಂದಿಕೊಂಡಂತೆ ಖಾಸಗಿ ವ್ಯಕ್ತಿಯೊಬ್ಬ ನಿಯಮ ಮೀರಿ ಕಟ್ಟಡ ಕಟ್ಟಿ ರಾಜರೋಷವಾಗಿ ಹೊಟೇಲ್ ತೆರೆದಿದ್ದರು ಸಹ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಕಣ್ಣು ಮುಚ್ಚಿ ಕುಳಿತಿರುವುದನ್ನು ಕಾಣಬಹುದಾಗಿದೆ.
ತಾಲ್ಲೂಕಿನ ಮೈಸೂರು ಮಾನಂದವಾಡಿ ಮುಖ್ಯ ರಸ್ತೆಯ ಮೈಸೂರು ಮತ್ತು ಎಚ್.ಡಿ.ಕೋಟೆ ತಾಲ್ಲೂಕಿನ ಗಡಿಭಾಗದಲ್ಲಿ ಮೈಸೂರು ತಾಲ್ಲೂಕಿಗೆ ಸೇರಿಕೊಂಡಂತೆ ಇರುವ ಕಂಚಮಹಳ್ಳಿ– ಮಂಡನಹಳ್ಳಿ ಗ್ರಾಮದ ಮಧ್ಯದಲ್ಲಿರುವ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಫಿಸ್ ಲ್ಯಾಂಡ್ ಗ್ರೂಪ್ ನವರು ನಿರಂತರ ಪೂಜಾರಿ ಎಂಬ ಹೆಸರಿನ ಹೋಟೆಲ್ ನ್ನು ಮೂರು ಎಕರೆ ಜಾಗದಲ್ಲಿ ನಿರ್ಮಾಣ ಮಾಡಿದ್ದಾರೆ, ಈ ಹಿಂದೆ ತನ್ನ ಹದ್ದುಬಸ್ತಿಗೆ ಕಾಂಪೌಂಡ್ ನಿರ್ಮಾಣ ಮಾಡಿಕೊಂಡು ವಹಿವಾಟು ನಡೆಸುತ್ತಿದ್ದು, ಒಂದು ವರ್ಷದ ಈಚೆಗೆ ಕಾಂಪೌಂಡ್ ನಿಂದ ಹೊರಬಂದು ಸುಮಾರು 50 ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿ ಇಲ್ಲಿ ಕ್ಯಾಂಟೀನ್ ತೆರೆದಿದ್ದಾರೆ.
ರಾಜ್ಯ ಹೆದ್ದಾರಿ ರಸ್ತೆ ಆಗಿರುವುದರಿಂದ ಪ್ರತಿನಿತ್ಯ ಮೈಸೂರಿನಿಂದ ಕೇರಳ ರಾಜ್ಯಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಈಗಾಗಲೇ ರಸ್ತೆ ತುಂಬಾ ಕಿರಿದಾಗಿದೆ. ಹಲವಾರು ಸಂದರ್ಭದಲ್ಲಿ ಈ ಸ್ಥಳದ ಹಿಂದೆ ಮುಂದೆ ಅಪಘಾತಗಳು ಸಂಭವಿಸಿ ಸಾವುನೋವುಗಳು ಸಂಭವಿಸಿವೆ.
ಇಷ್ಟಿದ್ದರು ಸಹ ನಿರಂತರ ಪೂಜಾರಿ ಹೋಟೆಲ್ ಮಾಲೀಕರು ರಸ್ತೆಯಲ್ಲಿ ಕಟ್ಟಡ ಕಟ್ಟಿರುವುದರಿಂದ ಮೈಸೂರು ಕಡೆಯಿಂದ ಬರುವಾಗ ಎದುರಿಗೆ ಬರುವ ವಾಹನಗಳು ಕಾಣುತ್ತಿಲ್ಲ ಈಗಾಗಿ ಅಪಘಾತ ಸಂಭವಿಸಿದರೆ ಇವರು ನೇರ ಕಾರಣರಾಗಿರುತ್ತಾರೆ ಎನ್ನುವ ಆಕ್ರೋಶ ಕೇಳಿ ಬಂದಿದೆ.
ಗಡಿಭಾಗದಲ್ಲಿ ಹೋಟೆಲ್ ಇರುವುದರಿಂದ ಇದನ್ನೇ ಬಂಡವಾಳ ಮಾಡಿಕೊಂಡಿರುವ ಹೋಟೆಲ್ ಮಾಲೀಕ ಅಧಿಕಾರಿಗಳಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಹೋಟೆಲ್ ಕಟ್ಟಿರುವ ಜಾಗವು ಬಹುತೇಕ ಮೈಸೂರು ತಾಲ್ಲೂಕಿಗೆ ಬರುವುದರಿಂದ ಅಲ್ಲಿನ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಈ ಮಾರ್ಗವಾಗಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಬಂದು ಹೋಗುತ್ತಿದ್ದಾರೆ, ಆದರೂ ಕೂಡ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡು ಹೋಟೆಲ್ ನಿರ್ಮಾಣ ಮಾಡಿರುವುದನ್ನು ತೆರವು ಗೊಳಿಸಲು ಮುಂದಾಗಿಲ್ಲದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಸಾಮಾನ್ಯ ಬೀದಿ ಬದಿ ವ್ಯಾಪಾರಿಗಳು ಸಣ್ಣ ಪೆಟ್ಟಿಗೆ ಹಾಕಿಕೊಂಡು ಜೀವನ ನಿರ್ವಹಣೆ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ಬಡಜನರ ಬದುಕು ಕಸಿದುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಅರ್ಧ ಎಕರೆ ಸರ್ಕಾರಿ ಜಾಗವನ್ನು ಯಾವುದೇ ಭಯ ಇಲ್ಲದೆ ಒತ್ತುವರಿ ಮಾಡಿಕೊಂಡು ಹೋಟೆಲ್ ನಿರ್ಮಾಣ ಮಾಡಿ ಸರ್ಕಾರಕ್ಕೆ ಸವಾಲು ಹಾಕುವ ವ್ಯಕ್ತಿಗಳ ಮೇಲೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೆ ಇರುವುದು ಬಡವರಿಗೆ ಒಂದು ನ್ಯಾಯ ಬಲಿತ ರಿಗೆ ಒಂದು ನ್ಯಾಯ ಎನ್ನುವಂತೆ ಆಗಿದೆ.
ತಕ್ಷಣ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆಯಲ್ಲಿ ಅಕ್ರಮವಾಗಿ ಹೋಟೆಲ್ ನಿರ್ಮಾಣ ಮಾಡಿರುವ ಜಾಗವನ್ನು ತೆರವು ಗೊಳಿಸದೆ ಇದ್ದರೆ ಹೆದ್ದಾರಿ ರಸ್ತೆಯಲ್ಲಿ ಕುಳಿತು ಹೋರಾಟ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಎಚ್.ಡಿ.ಕೋಟೆಯ ಪರಿಸರ ಪ್ರೇಮಿ ಭೀಮ ರಾಜ್ ಈ ಬಗ್ಗೆ ಪ್ರತಿಕ್ರಿಯಿಸಿ, ಸಾರ್ವಜನಿಕರಿಗೆ ಅಡ್ಡಿ ಆಗುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಕುಮ್ಮಕ್ಕಿನಿಂದ ಖಾಸಗಿ ವ್ಯಕ್ತಿ ರಸ್ತೆಯಲ್ಲಿ ಹೋಟೆಲ್ ನಿರ್ಮಾಣ ಆಗಲು ಅಧಿಕಾರಿಗಳೇ ನೇರ ಕಾರಣ. ಸಾರ್ವಜನಿಕರ ಹಿತದೃಷ್ಟಿಯಿಂದ ಸುಗಮ ಸಂಚಾರಕ್ಕೆ ಅವಕಾಶ ಆಗುವಂತೆ ಅಕ್ರಮವಾಗಿ ಕಟ್ಟಿರುವ ಕಟ್ಟಡವನ್ನು ತೆರವು ಗೊಳಿಸಬೇಕು ಎಂದು ಒತ್ತಾಯಿಸಿದರು.
ಮೈಸೂರು ತಾಲ್ಲೂಕು ಲೋಕೋಪಯೋಗಿ ಇಲಾಖೆ ಎಇ ಚನ್ನಪ್ಪ ಪ್ರತಿಕ್ರಿಯಿಸಿ, ಮೈಸೂರು ಮಾನಂದವಾಡಿ ರಸ್ತೆಯ ಮೈಸೂರು ತಾಲ್ಲೂಕಿಗೆ ಸೇರಿದ ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡು ಖಾಸಗಿ ವ್ಯಕ್ತಿ ಹೋಟೆಲ್ ನಿರ್ಮಾಣ ಮಾಡಿರುವುದು ನಾನು ಪರಿಶೀಲನೆ ಮಾಡಿದಾಗ ಕಂಡುಬಂದಿದೆ. ದಸರ ಹಬ್ಬದ ಒಳಗೆ ರಸ್ತೆ ಒತ್ತುವರಿ ಮಾಡಿಕೊಂಡು ಕಟ್ಟಿರುವ ಕಟ್ಟಡವನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC