ಗುಬ್ಬಿ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತವರು ಕ್ಷೇತ್ರ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಸರ್ಕಾರಿ ಶಾಲೆ ವಿದ್ಯಾರ್ಥಿ ಗಳಿಗೆ ಉತ್ತಮ ಗುಣಮಟ್ಟದ ಬಿಸಿಯೂಟದ ಆಹಾರ ಸಾಮಗ್ರಿಗಳು ಸಿಗುತ್ತಿಲ್ಲ. ಸದ್ಯ ಹುಳು ಹಿಡಿದಿರುವ ಆಹಾರ ಸಾಮಗ್ರಿಗಳನ್ನು ಸರ್ಕಾರ ಪೂರೈಸುತ್ತಿದ್ದು, ಈ ಹುಳು ಹಿಡಿದ ಆಹಾರ ವಸ್ತುಗಳನ್ನೇ ಬಳಸಿ ಆಹಾರ ತಯಾರಿಸುವ ಅನಿವಾರ್ಯ ಸ್ಥಿತಿ ಶಾಲಾ ಅಡುಗೆ ಸಿಬ್ಬಂದಿಯದ್ದಾಗಿದೆ.
ಗುಬ್ಬಿ ತಾಲ್ಲೂಕಿನ ಲ್ಲಿ ಒಟ್ಟು 441 ಸರ್ಕಾರಿ ಶಾಲೆಗಳಿದ್ದು, ಪ್ರತಿ ತಿಂಗಳು ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ 750 ಕೆ.ಜಿ.ಅಕ್ಕಿ ಸರಬರಾಜು ಆಗುತ್ತಿದೆ. 130 ಕ್ವಿಂಟಾಲ್ ಗೋದಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಒಬ್ಬ ವಿದ್ಯಾರ್ಥಿಗೆ ತಲಾ 100 ಗ್ರಾಂ ನಷ್ಟು ಲೆಕ್ಕದಲ್ಲಿ 5 ತಿಂಗಳ ಬಾಕಿ ಸೇರಿ 730 ಕ್ವಿಂಟಾಲ್ ಆಹಾರ ಸಾಮಗ್ರಿ ನೀಡಲಾಗಿದೆ ಎಂದು ಗುಬ್ಬಿ ತಾಲೂಕು ಅಕ್ಷರ ದಾಸೋಹ ನಿರ್ದೇಶಕ ಯೋಗಾನಂದ್ ತಿಳಿಸಿದರು.
ಪ್ರತಿ ಶಾಲೆಯಲ್ಲಿ ಆಹಾರ ತಯಾರಿಸಲು ಅಡುಗೆಯವರು ಹಾಗೂ ಸಹಾಯಕರು ಕೆಲಸ ಮಾಡುತ್ತಿದ್ದು ಕಳೆದ 6 ತಿಂಗಳಿಂದ ಇವರಿಗೆ ಮಾಸಿಕ ವೇತನ ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿದೆ. ಆಹಾರ ತಯಾರಿಸುವ ವಿಧಾನದಿಂದ ಆಹಾರ ಸಾಮಾಗ್ರಿಗಳನ್ನು ಶುದ್ಧೀಕರಣ ಮಾಡುವ ಜವಾಬ್ದಾರಿ ಇವರಿಗೆ ನೀಡಲಾಗಿದೆ. ಆದರೆ ಅಕ್ಷರ ದಾಸೋಹ ಯೋಜನೆಯಡಿ ವಿತರಣೆ ಮಾಡುವ ಪಡಿತರದಲ್ಲಿ ಕಸ , ಕಡ್ಡಿ ಮತ್ತು ಹುಳುಗಳು ಇರುವುದರಿಂದ ಆಹಾರ ಸಾಮಗ್ರಿಗಳನ್ನು ಶುದ್ಧ ಮಾಡಲು ಹರಸಾಹಸ ಪಡುವಂತಾಗಿದೆ.
ಇನ್ನೂ ಆಹಾರ ವಿತರಣೆಯ ಗುತ್ತಿಗೆ ಪಡೆದುಕೊಂಡಿರುವವರು ಆಹಾರ ಪದಾರ್ಥಗಳ ವಿತರಣೆಯ ಸಂದರ್ಭದಲ್ಲಿ ಪರಿಶೀಲನೆ ನಡೆಸದೇ ಹುಳ ಹಿಡಿದ, ಕಸಕಡ್ಡಿ ಮಿಶ್ರಿತ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಗುಬ್ಬಿ ಜಿ.ಹೊಸಹಳ್ಳಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಮುಖ್ಯ ಅಡುಗೆ ತಯಾರಾಕರಾದ ಕೃಷ್ಣಮ್ಮ ಮಾತನಾಡಿ, ಸರ್ಕಾರ ಸರಬರಾಜು ಮಾಡುತ್ತಿರುವ ಆಹಾರ ಪದಾರ್ಥಗಳು ಅಡುಗೆಗೆ ಬಳಸಲು ಯೋಗ್ಯ ವಾದದ್ದಲ್ಲ, ಆದರೂ ಸಹ ವಿಧಿ ಇಲ್ಲದೇ ಬರುವ ಆಹಾರದಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿ ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಸಮೀಪದ ಶಾಲೆಗಳಾದ ಲಕ್ಕೇನಹಳ್ಳಿ, ಅಮಾನಿಕೆರೆ, ಬಂಗ್ಲೋಪಾಳ್ಯ ಶಾಲೆಯಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದ್ದು ಈ ಶಾಲೆಗಳಲ್ಲಿ ಹಿಂದುಳಿದ ವರ್ಗದ , ಕೂಲಿ ಕಾರ್ಮಿಕರು, ಪರಿಶಿಷ್ಟ ಸಮುದಾಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆಯ ಬರುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯದ ಜೊತೆಗೆ ಶಿಕ್ಷಣ ಇಲಾಖೆ ಆಟವಾಡುತ್ತಿದೆ ಎನ್ನುವ ಆಕ್ರೋಶ ಕೇಳಿ ಬಂದಿದೆ.
ಅಕ್ಷರ ದಾಸೋಹ ಪಡಿತರ ಸರಬರಾಜಿನಲ್ಲಿಯೂ ನಡೆಯುತ್ತಿರುವ ಅಕ್ರಮವನ್ನು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ತಕ್ಷಣವೇ ತಡೆಯಬೇಕು. ಈ ರೀತಿಯ ಕಳಪೆ ಆಹಾರ ಪೂರೈಕೆ ಮಾಡುವ ಏಜೆನ್ಸಿಗಳ ಗುತ್ತಿಗೆಯನ್ನು ರದ್ದುಪಡಿಸಬೇಕು. ಮಕ್ಕಳಿಗೆ ಪ್ರಾಣಿಗಳು ಕೂಡ ತಿನ್ನಲು ಯೋಗ್ಯವಲ್ಲದ ಆಹಾರವನ್ನು ಪೂರೈಸುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ತಕ್ಷಣವೇ ಈ ಸಂಬಂಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ. ಇಲ್ಲವಾದರೆ, ಸರ್ಕಾರ ಮತ್ತು ಶಿಕ್ಷಣ ಇಲಾಖೆ ಹಾಗೂ ಗುತ್ತಿಗೆದಾರರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಪರಿಗಣಿಸಿ ಸಾರ್ವಜನಿಕರು ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂಬ ಆಕ್ರೋಶದ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬಂದಿದೆ.
ವರದಿ.ಡಿ.ಮಂಜುನಾಥ್. ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy