ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ವಲಯದ ರಟ್ಟೆನಹಳ್ಳಿ ಒಕ್ಕೂಟದವರು ಎರಡೂ ಕಣ್ಣುಗಳನ್ನು ಕಳೆದುಕೊಂಡು ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಗ್ರಾಮದ ಸೀತಮ್ಮ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿಯವರಾದ ಪರಮ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಪ್ರತೀ ತಿಂಗಳು ನೀಡುತ್ತಿರುವ 1 ಸಾವಿರ ರೂಪಾಯಿ ಮಾಸಾಶನವನ್ನು ವಿತರಿಸಿದರು.
ಜೊತೆಯಲ್ಲಿ ಸೀತಮ್ಮ ಹಾಗೂ ಪರಶುರವರಿಗೆ ಒಕ್ಕೂಟದವರು ಒಂದು ತಿಂಗಳಿಗೆ ಸಾಕಾಗುವಷ್ಟು ದಿನಸಿ ಸಾಮಗ್ರಿಗಳನ್ನ ಉಚಿತವಾಗಿ ವಿತರಿಸಿ ಮಾನವೀಯತೆ ಮೆರೆದರು.
ತಾಲೂಕು ಯೋಜನಾಧಿಕಾರಿ ಉದಯ್ ಕೆ. ಈ ಸಂದರ್ಭದಲ್ಲಿ ಮಾತನಾಡಿ, ರಟ್ಟೆನಹಳ್ಳಿಯ ಒಕ್ಕೂಟದ ಕಾರ್ಯವು ಶ್ರೀ ಮಂಜುನಾಥಸ್ವಾಮಿಯ ಸೇವೆ ಮಾಡಿದಂತಿದ್ದು, ಈ ರೀತಿಯಲ್ಲಿ ಸಮಾಜದಲ್ಲಿ ನೊಂದವರಿಗೆ ಸಹಾಯ ಹಸ್ತಚಾಚುದರಿಂದ ಮಾನವೀಯತೆಗೊಂದು ನಿಜವಾದ ಅರ್ಥ ಸಿಕ್ಕಿದಂತಾಗುತ್ತದೆ ಎಂದರು.
ಪೂಜ್ಯರು ನಮ್ಮ ತಾಲೂಕಿನಲ್ಲಿ ನೊಂದ 101 ಪಾಲಾನುಭವಿಗಳಿಗೆ ರೂ 1,000/- ದಂತೆ ಒಂದು ಲಕ್ಷಕ್ಕೂ ಮಿಕ್ಕಿ ಮಾಸಾಶನದ ಸಹಾಯಧನವನ್ನು ಪ್ರತೀ ತಿಂಗಳು ನೀಡುತ್ತಿದ್ದು, ನೊಂದವರ ಪಾಲಿಗೆ ಆಶಾಕಿರಣವಾಗಿದ್ದಾರೆ ಹಾಗೂ ಹುಟ್ಟು ವಿಕಲ ಚೇತನರಿಗೆ ಮತ್ತು ಅಪಘಾತದಲ್ಲಿ ಅಂಗಾಂಗ ಕಳೆದುಕೊಂಡವರಿಗೆ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಾಟರ್ ಬೆಡ್, ಕಮಂಡರ್, ವೀಲ್ ಚಯರ್, ವಾಕಿಂಗ್ ಸ್ಟಿಕ್, ಯೂ ಶೇಪ್ ಕಮೊಂಡರ್, ಇವುಗಳನ್ನು ಉಚಿತವಾಗಿ ನೀಡುತ್ತಿದ್ದು ನೊಂದು ಬೆಂದವರಿಗೆ ಪೂಜ್ಯರ ಈ ಕಾರ್ಯಕ್ರಮ ನರಳಿ ಸೋರಗುವ ಜೀವಕ್ಕೆ ನಂದಾ ದೀಪವಾಗಿದೆ ಎಂದರು.
ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಪರಶಿವ ಮೂರ್ತಿ ಎ.ಎಮ್., ಸೇವಾಪ್ರತಿನಿಧಿ ಮಮತಾ ವಿ .ಎಲ್.ಇ .ಸೇವಾದಾರರಾದ ಹರ್ಷ ಮಾನಸ, ಸಂಘದ ಸದಸ್ಯರು, ಗ್ರಾಮಾಸ್ಥರು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q