ಪ್ರಾಯಶಃ ಇನ್ನು ಮೂರ್ನಾಲ್ಕು ದಿನದಲ್ಲಿ ಚುನಾವಣೆಯ ಅಧಿಸೂಚನೆ ಹೊರಬೀಳಬಹುದು. ಆ ನಿಟ್ಟಿನಲ್ಲಿ ಸಂಸದನಾಗಿ ನಾನು ಇನ್ನೂ ಮೂರ್ನಾಲ್ಕು ದಿನ ಮಾತ್ರ ಕೆಲಸ ಮಾಡಬಲ್ಲೆ.ಕಳೆದ 10 ವರ್ಷಗಳಲ್ಲಿ ನನ್ನನ್ನು ಹರಸಿದ, ಬೆಳೆಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ನನ್ನನ್ನು ಟೀಕೆಗಳ ಮೂಲಕ ತಿದ್ದಿದವರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಅವರು, ನನಗೆ ಟಿಕೆಟ್ ಸಿಗೋದು ಅನುಮಾನ ಎಂದಾಗ ನನ್ನ ಪರವಾಗಿ ಹಲವಾರು ಸಂಘ ಸಂಸ್ಥೆಗಳು ನಿಂತವು. ಜನರು ನಿಂತರು. ಅಚ್ಚರಿಯೆಂದರೆ, ನನ್ನನ್ನು ಟೀಕಿಸುತ್ತಿದ್ದ ಎಡಪಕ್ಷದವರೂ… ಛೇ… ಇವನು ಕೆಲಸ ಮಾಡಿದ್ದಾನೆ. ಇವನಿಗೆ ಟಿಕೆಟ್ ಸಿಗಬೇಕು ಎಂಬಂಥ ಮಾತುಗಳನ್ನಾಗಿದ್ದು ನನಗೆ ಅತ್ಯಂತ ಖುಷಿ ತಂದಿದೆ. ಕಳೆದ ನಾಲ್ಕು ದಿನಗಳಲ್ಲಿ ನೀವು ತೋರಿದ ಪ್ರೀತಿ, ನನ್ನ ಬಗ್ಗೆ ಇಟ್ಟಿರುವ ನಂಬಿಕೆ ನನ್ನಲ್ಲಿ ಮತ್ತಷ್ಟು ಕಿಚ್ಚು ಹೊತ್ತಿಸಿದೆ. ಜನಪರ ಕೆಲಸಗಳೆಂದರೆ ಅದು ಥ್ಯಾಂಕ್ ಲೆಸ್ ಜಾಬ್ ಎಂದುಕೊಂಡಿದ್ದೇನೆ ನಾನು. ಆದರೆ, ನಿಮ್ಮ ಪ್ರೀತಿ ನನ್ನ ಅಭಿಪ್ರಾಯವನ್ನು ಬದಲಾಯಿಸಿದೆ” ಎಂದರು.
ಸಂಸದನಾಗಿ 10 ವರ್ಷಗಳ ಅವಧಿಯಲ್ಲಿ ನಾನು ನನ್ನ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಿ, ಹಠ ತೊಟ್ಟು ಕಾರ್ಯಸಾಧನೆಗಳನ್ನು ಮಾಡಿದ್ದೇನೆ. ಅದರ ಬಗ್ಗೆ ನನಗೆ ಸಂಪೂರ್ಣ ಸಂತೃಪ್ತಿಯಿದೆ. ಅದೇ ಕಾರಣಕ್ಕಾಗಿ ನಾನು ಚುನಾವಣೆಯಲ್ಲಿ ಸುಮಾರು ಒಂದೂವರೆ ಲಕ್ಷ ಲೀಡ್ ಪಡೆದು ಗೆಲ್ಲುವಷ್ಟು ಬೆಳೆದಿದ್ದೇನೆ. ಜನರು ನನ್ನ ಮೇಲೆ ಅಷ್ಟು ವಿಶ್ವಾಸವಿಟ್ಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಕ್ಕರೆ, ಈಗ ಎಷ್ಟು ಮಾಡಿದ್ದೇನೋ ಅದಕ್ಕಿಂತ ಹೆಚ್ಚು ಕೆಲಸ ಮಾಡುತ್ತೇನೆ” ಎಂದು ಅವರು ಹೇಳಿದರು.
ಕೊಡಗಿನ ಕಾವೇರಿ ತಾಯಿ, ಬೆಟ್ಟದ ಮೇಲೆ ಕುಳಿತಿರುವ ಚಾಮುಂಡಿ ತಾಯಿ ಆಶೀರ್ವಾದವಿದ್ದರೆ ನನಗೆ ಟಿಕೆಟ್ ಸಿಗುತ್ತದೆ. ಒಂದು ವೇಳೆ ಟಿಕೆಟ್ ಸಿಗದಿದ್ದರೂ ತೊಂದರೆಯಿಲ್ಲ. ನಿಮ್ಮ (ಜನರ) ನಡುವೆ ನಿಲ್ಲುತ್ತೇನೆ. ಮೋದಿಯವರು ಈ ದೇಶದ ಪ್ರಧಾನಿಯಾಗಬೇಕು, ದೇಶಕ್ಕೆ ಒಳ್ಳೆಯದಾಗಬೇಕು, ನಮ್ಮ ಕ್ಷೇತ್ರಕ್ಕೆ ಒಳ್ಳೆಯದಾಗಬೇಕು. ಅದಕ್ಕಾಗಿ ಶ್ರಮಿಸುತ್ತೇನೆ. ಮೋದಿಯವರ ಅಭಿಮಾನಿಗಳ ಪಡೆಯನ್ನು ಕಟ್ಟುತ್ತೇನೆ ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


