ಮದುವೆ ಹಿಂದಿನ ದಿನ ಸಿಹಿ ತಿಂಡಿ ನೀಡಿಲ್ಲ ಎಂದು ಮದುವೆಯನ್ನೇ ರದ್ದುಗೊಳಿಸಿದ ವಿಲಕ್ಷಣ ಘಟನೆಯೊಂದು ಮಡಿಕೇರಿಯ ಕಲ್ಯಾಣಮಂಟಪದಲ್ಲಿ ನಡೆದಿದೆ.
ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆಯ ಯುವತಿಯ ವಿವಾಹವು ತುಮಕೂರು ಜಿಲ್ಲೆಯ ಯುವಕನೋರ್ವನೊಂದಿಗೆ ನಿಶ್ಚಯವಾಗಿತ್ತು. ಮೇ.5 ರಂದು ಜಾನಕಿ ಕನ್ವೆನ್ಶನ್ ಹಾಲ್ ನಲ್ಲಿ ವಿವಾಹ ನಿಗದಿಯಾಗಿತ್ತು.
ತುಮಕೂರಿನಿಂದ ವರನ ಕಡೆಯವರು ಶನಿವಾರ ಸಂಜೆ ಮಂಟಪಕ್ಕೆ ಬಂದಿದ್ದರು. ಆದರೆ ರಾತ್ರಿಯ ಊಟದಲ್ಲಿ ಸಿಹಿತಿಂಡಿ ಇಲ್ಲ ಎಂಬ ಕಾರಣಕ್ಕೆ ತಗಾದೆ ತೆಗೆಯಲಾಗಿದ್ದು, ಗಲಾಟೆ ಶುರುವಾಗಿದೆ. ಮಂಟಪದಲ್ಲಿಯೇ ತಳ್ಳಾಟ, ನೂಕಾಟ ನಡೆದಿದೆ.
ಮರುದಿನ ಬೆಳಗ್ಗೆ ಅಂದರೆ ರವಿವಾರ ಪ್ರಕರಣ ಪೊಲೀಸ್ ಠಾಣೆಗೆ ಹೋಗಿದೆ. ಶನಿವಾರ ಮದುವೆ ಬೇಡ ಎಂದು ಉಂಗುರ ಕಳಚಿಟ್ಟಿದ್ದ ವರ, ರವಿವಾರ ನಾನು ಮದುವೆಯಾಗುತ್ತೇನೆ ಎಂದು ಹೊಸ ವರಸೆ ಪ್ರಾರಂಭಿಸಿದ್ದ. ಆದರೆ ಈ ದಿಢೀರ್ ಘಟನೆಯಿಂದ ವಧು ಮದುವೆಯೇ ಬೇಡ ಎಂದು ಪೊಲೀಸರಲ್ಲಿ ಹೇಳಿಕೆ ನೀಡಿದ್ದಾಳೆ.
ಮದುವೆಗೆ ಖರ್ಚು ಮಾಡಿದ ಹಣವನ್ನು ವರನ ಕಡೆಯವರು ನೀಡಬೇಕೆಂದು ವಧುವಿನ ಕಡೆಯವರು ಪೊಲೀಸ್ ಠಾಣೆ ಮುಂದೆ ಹೇಳಿದ್ದಾರೆ. ನಂತರ ಹಣಕಾಸಿನ ವಿಚಾರ ನೀವೇ ನೋಡ್ಕೊಳ್ಳಿ ಎಂದು ಪೊಲೀಸರು ಪ್ರಕರಣಕ್ಕೆ ಅಂತ್ಯ ಹಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296