ತುಮಕೂರು: ನನಗೂ ಹಾಸನಕ್ಕೂ ಏನ್ ಸಂಬಂಧ ಗೊತ್ತಿಲ್ಲ. ನನಗೆ ಹಾಸನದ ಉಸ್ತುವಾರಿ ಹಾಕಿದ್ದಾರೆ. ಕೆಲವರು ನನ್ನ ಅಭಿಮಾನಿಗಳು ಹೆದರಿಕೊಂಡು ಬಿಟ್ಟಿದ್ದರು. ಸಾರ್ ನೀವು ಹಾಸನಕ್ಕೆ ಹೋಗುವುದು ಬೇಡ ಎಂದರು. ಯಾಕಂದ್ರೆ ಅಲ್ಲಿ ವಾಮಾಚಾರ ಮಾಡ್ತಾರೆ ಹೋಗಬೇಡಿ ಅಂದಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ತಿಳಿಸಿದ್ದಾರೆ.
ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ನಡೆದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ, ಆಗ ನಾನು ಹೇಳಿದೆ, ಯಾರಾದ್ರೂ ವಾಮಾಚಾರ ಮಾಡೋರು ಇದ್ರೆ ಸ್ವತಃ ನಾನೇ ಕೂತ್ಕೊಳ್ತೀನಿ ನನ್ನ ಮೇಲೆ ವಾಮಾಚಾರ ಮಾಡಿ ಎಂದೆ.
ನಾವು ಉಗ್ರ ನರಸಿಂಹ ಸ್ವಾಮಿ ಭಕ್ತರು, ಹಾಗಾಗಿ ನಮಗೆ ಯಾವ ವಾಮಚಾರನೂ ತಾಕೋದಿಲ್ಲ. ಹಾಗಂತ ವಾಮಾಚರ ತಗುಲುವುದಿಲ್ಲ ಅನ್ಕೋಬೇಡಿ. ನಾನು ಹಾಸನಕ್ಕೆ ಕುಣಿಗಲ್ ಮೂಲಕ ಮೊದಲ ದಿನ ಹೋಗುತ್ತಿದ್ದಾಗ ಕುಣಿಗಲ್ ನಲ್ಲಿ ಪಟಾಕಿ ಸಿಡಿದು, ಕಣ್ಣಿಗೆ ಏಟಾಗಿತ್ತು ಎಂದರು.
ಡಾಕ್ಟರ್ ಕಣ್ಣು ಕ್ಲೀನ್ ಮಾಡಿ ಹಾಸನಕ್ಕೆ ಹೋಗುವುದು ಬೇಡ ಎಂದಿದ್ದರು. ಎರಡೂ ಕಣ್ಣು ಹೋದರೂ ಪರವಾಗಿಲ್ಲ ಎಂದು ಧೈರ್ಯದಿಂದ ಹೋದೆ. ಹೆದರಿ ಹಾಸನಕ್ಕೆ ಬಂದಿಲ್ಲ ಎಂಬ ಸಂದೇಶ ಹೋಗುತ್ತೆ ಅಂತ ಹೇಳಿ ಹಠದಿಂದ ಹೋದೆ ಎಂದರು.
ವೇದಿಕೆ ಭಾಷಣದಲ್ಲಿ ತಮ್ಮ ಜನಾಂಗದ ಬಗ್ಗೆ ಪರ ವಿರೋಧ ಎರಡೂ ಮಾತನಾಡಿದ ರಾಜಣ್ಣ, ನಾವು ಹುಟ್ಟುತ್ತಲೇ ನಾಯಕರು, ಹಾಗಾಗಿ ಬೇರೆಯವರನ್ನು ನಾವು ನಾಯಕರು ಎಂದು ಒಪ್ಪಿಕೊಳ್ಳು ಸಾಧ್ಯವಿಲ್ಲ ಎಂದರು.
ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿದೆ. ಹಾಗಾಗಿ ನಾವು ಅಭಿವೃದ್ಧಿಯಾಗುತ್ತಿಲ್ಲ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಆಸ್ತಿಯಾಗಿಬೇಕು. ಮಧುಗಿರಿಯಲ್ಲಿ ನಮ್ಮ ಜಾತಿಯವರಿಂದಲೇ ನಮಗೆ ಗೂಟ ಬೀಳ್ತಾ ಇದೆ ಎಂದರು. ಬೇರೆ ಸಮುದಾಯದವರು ನನ್ನ ಕೈ ಹಿಡಿಯುತಿದ್ದಾರೆ. ಯಾಕೆಂದರೆ ನಾನು ಎಲ್ಲಾ ವರ್ಗದ ಬಡ ಜನರ ಪರವಾಗಿದ್ದವನು ಎಂದರು.