ಬೆಂಗಳೂರು: ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದ ಅಭಿವೃದ್ಧಿಗೆ ನೇರ ಸಂಬಂಧವಿದೆ. ಆದ್ದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲೇಬೇಕು. ಕರ್ನಾಟಕ ಪೋಲೀಸರ ಬಗ್ಗೆ ದೇಶದಲ್ಲಿ ಒಳ್ಳೆ ಹೆಸರಿದೆ. ಈ ಹೆಸರಿಗೆ ಕಳಂಕ ತರುವ ಕೆಲಸ ಯಾರೂ ಮಾಡಬಾರದು. ಹೆಸರನ್ನು ಎತ್ತರಕ್ಕೇರಿಸುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮೇಳನ ಹಾಗೂ ಇಲಾಖೆ ಪರಿಶೀಲನಾ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ಹೆಚ್ಚು ಬಂಡವಾಳ ಹೂಡಿಕೆಯಾಗುತ್ತದೆ. ಬಂಡವಾಳ ಹೂಡಿಕೆಯಾದರೆ ಉದ್ಯೋಗ ಸೃಜನೆಯಾಗಿ ತಲಾ ಆದಾಯ ಹೆಚ್ಚಾಗುತ್ತದೆ ಎಂದರು.
ಕರ್ತವ್ಯ ಲೋಪವಾದರೆ ಸಹಿಸುವುದಿಲ್ಲ:
ಸಾರ್ವಜನಿಕರ ಅಭಿಪ್ರಾಯ ರೂಪಿತವಾಗುವ ಬಗ್ಗೆ ಪೋಲೀಸರು ಗಮನ ಹರಿಸಬೇಕು. ಪೊಲೀಸ್ ವ್ಯವಸ್ಥೆಯಲ್ಲಿ ಜನರ ಆಸ್ತಿಪಾಸ್ತಿ ಪ್ರಾಣ, ಮಾನ ರಕ್ಷಣೆ, ಸುರಕ್ಷಿತ ವ್ಯವಸ್ಥೆ, ನಿರ್ಭಯವಾಗಿ ಬದುಕುವ ವ್ಯವಸ್ಥೆ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ. ಒಳ್ಳೆ ಕೆಲಸ ಮಾಡಿದರೆ ಸರ್ಕಾರ ಶ್ಲಾಘನೆ, ಕರ್ತವ್ಯ ಲೋಪವಾದರೆ ಸಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದರು.
ರಿಯಲ್ ಎಸ್ಟೇಟ್ ಮಾಡುವವರೊಂದಿಗೆ ಯಾವ ಕಾರಣಕ್ಕೂ ಶಾಮೀಲಾಗಬಾರದು. ಇವರೇ ಸ್ವತ: ರಿಯಲ್ ಎಸ್ಟೇಟ್ ಮಾಡುವುದು ತಿಳಿದರೆ ಕಠಿಣ ಕ್ರಮ ಜರುಗಿಸಲಾಗುವುದು. ಎಸ್. ಪಿ, ಡಿಸಿಪಿ, ಐಜಿ, ಪೊಲೀಸ್ ಆಯುಕ್ತರು ಪ್ರತಿ ದಿನ ಒಂದು ಪೊಲೀಸ್ ಠಾಣೆಗೆ ಭೇಟಿ ನೀಡಲೇ ಬೇಕು. ಸ್ಥಳೀಯ ಜನರನ್ನು ಭೇಟಿ ಮಾಡಿ ಇಲ್ಲಿನ ಸಮಸ್ಯೆಗಳೇನು ಎಂದು ಅರಿಯಬೇಕು. ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಯದೆ ಯಾವ ಅಪರಾಧಗಳು ನಡೆಯಲು ಸಾಧ್ಯವಿಲ್ಲ. ಮಾದಕ ವಸ್ತು, ಕಳ್ಳತನ, ದರೋಡೆ, ಜೂಜು, ಮಟ್ಕಾ ಮುಂತಾದವು ಗೊತ್ತಿಲ್ಲದೆ ನಡೆಯಲು ಸಾಧ್ಯವಿಲ್ಲ. ಕೆಲವೆಡೆ ಪೋಲಿಸಿನವರು ಇಂಥವರ ಜೊತೆ ಶಾಮೀಲಾಗುತ್ತಾರೆ. ಅವರು ಮನಸ್ಸು ಮಾಡಿದರೆ ಬಹುತೇಕ ಅಪರಾಧಗಳನ್ನು ತಡೆಯಲು ಸಾಧ್ಯ. ಇವರೆಲ್ಲರೂ ಜಾಗೃತರಾಗಲು ಪೊಲೀಸ್ ಅಧಿಕಾರಿಗಳು ಮೇಲಿಂದ ಮೇಲೆ ಭೇಟಿ ನೀಡಬೇಕು. ಕನಿಷ್ಠ ಒಂದು ತಿಂಗಳಲ್ಲಿ ಮೂರು ಠಾಣೆಗಳಿಗೆ ಭೇಟಿ ನೀಡಿ ಜನಸಂಪರ್ಕ ಮಾಡಿದರೆ ವಿಷಯ ತಿಳಿಯುತ್ತದೆ ಇದನ್ನು ಕಟ್ಟುನಿಟ್ಟಾಗಿ ಮಾಡಲು ಸೂಚಿಸಲಾಗಿದೆ ಎಂದರು.
ಪೊಲೀಸರ ಮಧ್ಯೆ ಸಮನ್ವಯದ ಕೊರತೆಯಿದೆ. ಪೊಲೀಸರಿಗೆ ದೂರದೃಷ್ಟಿ ಇರಬೇಕು. ಒಂದು ಮಾಹಿತಿ ಬಂದರೆ ಅದರ ಬಗ್ಗೆ ಫಾಲೋ ಆಫ್ ಕ್ರಮ ವಹಿಸಬೇಕು. ಹುಬ್ಬಳ್ಳಿಯಲ್ಲಿ ನೇಹಾ ಕೊಲೆಯ ನಂತರ ಆದ ಮತ್ತೊಂದು ಕೊಲೆ ಪ್ರಕರಣದಲ್ಲಿ ಆರೋಪಿ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗಲೇ ಕ್ರಮಕೈಗೊಂಡಿದ್ದರೆ ಕೊಲೆ ತಡೆಯಲು ಸಾಧ್ಯವಾಗುತ್ತಿತ್ತು ಎಂದು ಉದಾಹರಣೆಗಳನ್ನು ನೀಡಿ ಸೂಚನೆ ನೀಡಲಾಗಿದೆ ಎಂದರು.
ಪೊಲೀಸರಲ್ಲಿ ಶಿಸ್ತು ಇರಲೇಬೇಕು. ಎಲ್ಲಾ ಪೋಲೀಸರು ಶಿಸ್ತು ಕಾಪಾಡಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿರುವುದಾಗಿ ತಿಳಿಸಿದರು.
ಹೊಸರೂಪ ಅಪರಾಧ ತಡೆಗೆ ಹೆಚ್ಚಿನ ತರಬೇತಿ:
ಸಮಾಜದಲ್ಲಿ ಬೆಳವಣಿಗೆಯಾದಂತೆ ಹೊಸ ರೂಪದ ಅಪರಾಧಗಳು ಸೃಷ್ಟಿಯಾಗುತ್ತವೆ. ಅವುಗಳನ್ನು ತಡೆಯಲು ತಂತ್ರಜ್ಞಾನ ಸೇರಿದಂತೆ ಹೆಚ್ಚಿನ ತರಬೇತಿ ನೀಡಲು ಸೂಚಿಸಲಾಗಿದೆ.
ಮಾದಕವಸ್ತುಗಳ ದಂಧೆ ಮೈಸೂರು, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಧಾರವಾಡ ಬೆಳಗಾವಿ ಮುಂತಾದೆಡೆ ಹೆಚ್ಚಾ ಗುತ್ತಿದೆ. ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಈ ವ್ಯವಹಾರದಲ್ಲಿ ಭಾಗಿಯಾಗಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಜನಸಂದಣಿ / ನಿರ್ಜನ ಪ್ರದೇಶದಲ್ಲಿ ಪೋಲೀಸರು ಸಮವಸ್ತ್ರದಲ್ಲಿರಬೇಕು:
ಇ — ಬೀಟ್ ಎಂದರೇನು ಎಂದು ಬಹಳ ಪೊಲೀಸರಿಗೆ ತಿಳಿದಿಲ್ಲ. ಜನಸಂದಣಿ ಇರುವಲ್ಲಿ ಹಾಗೂ ನಿರ್ಜನ ಪ್ರದೇಶದಲ್ಲಿ ಇ — ಬೀಟ್ ಹೆಚ್ಚು ಮಾಡಲಾಗುವುದು. ಪೊಲೀಸರ ಹಾಜರಿ ಸಮವಸ್ತ್ರದಲ್ಲಿರಬೇಕು. ಆಗ ಜನರಲ್ಲಿ ಭಯ ಮೂಡುತ್ತದೆ. ಇದರಿಂದ ಅಪರಾಧಗಳನ್ನು ನಿಲ್ಲಿಸಲು ಸಾಧ್ಯವಾಗುತ್ತದೆ ಎಂದರು.
ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಜೀರೋ ಟ್ರಾಫಿಲ್ ವ್ಯವಸ್ಥೆ ಮಾಡಬಾರದು ಎಂದು ಸೂಚಿಸಲಾಗಿದೆ. ಕಾನ್ಸ್ ಟೇಬಲ್ ಗಳ ಜೊತೆಗೆ ಉನ್ನತ ಅಧಿಕಾರಿಗಳು ಕೂಡ ಸಂಚಾರ ನಿಯಂತ್ರಣ ಮಾಡಲು ಸೂಚಿಸಲಾಗಿದೆ. ಪೊಲೀಸರು ಕಾನೂನು ವ್ಯವಸ್ಥೆಯನ್ನು ಸುಧಾರಿಸಬೇಕು ಎಂಬುದು ನಮ್ಮ ಉದ್ದೇಶ , ಇದಕ್ಕೆ ಪೋಲಿಸರು ಸಹಕರಿಸುತ್ತಾರೆ ಎಂಬ ನಂಬಿಕೆ, ವಿಶ್ವಾಸ ಇದೆ. ಪೋಲೀಸರು ಮನಸ್ಸು ಮಾಡಿದರೆ ಅಪರಾಧಗಳನ್ನು ತಡೆಗಟ್ಟುವುದು ಅಸಾಧ್ಯವೇನಲ್ಲ. ಇಂಟೆಲಿಜೆನ್ಸ್ ಬಲಬಡಿಸಲೂ ಕೂಡ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದರು.
ಕರ್ತವ್ಯ ಲೋಪವಾದರೆ ಮುಲಾಜಿಲ್ಲದೆ ಕ್ರಮ:
ನಮ್ಮ ಎಲ್ಲಾ ಕಾರ್ಯಗಳೂ ಕೂಡ ಪಾರದರ್ಶಕವಾಗಿರಬೇಕು ಎಂದು ಸೂಚಿಸಲಾಗಿದೆ. ಉದ್ದೇಶಪೂರ್ವಕವಾಗಿ ಕರ್ತವ್ಯಲೋಪ ಮಾಡಿದರೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದರು.
ವಿರೋಧಪಕ್ಷದವರು ಪ್ರಕರಣಗಳನ್ನು ಸಿಬಿಐಗೆ ವಹಿಸಲು ಒತ್ತಾಯಿಸುತ್ತಾರೆ. ಆದರೆ ಅಲ್ಲಿರುವವರೂ ನಮ್ಮ ಪೊಲೀಸರೇ. ಸಿಬಿಐ, ಸಿಐಡಿ ಕೂಡ ತನಿಖಾ ಸಂಸ್ಥೆಗಳೇ ಎಂದರು. ಅವರು ಅಧಿಕಾರದಲ್ಲಿದ್ದಾಗ ಚೋರ್ ಬಚಾವೋ ಸಂಸ್ಥೆ ಎನ್ನುತ್ತಿದ್ದರು. ಕೇಂದ್ರ ಸರ್ಕಾರ ಬೇರೆ ಬೇರೆ ರಾಜ್ಯಗಳಲ್ಲಿನ ಅಪರಾಧಗಳನ್ನು ತನಿಖೆ ಮಾಡಲು ಸ್ಥಾಪಿಸಿರುವ ಸಂಸ್ಥೆ ಸಿಬಿಐ. ರಾಜ್ಯ ಪೋಲೀಸರು ಕೂಡ ತನಿಖೆ ಮಾಡಲು ಸಮರ್ಥರಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


