ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಚಾಮರಾಜನಗರದಲ್ಲಿ ಕನ್ನಡಪರ ಹೋರಾಟಗಾರರು 37 ನೇ ದಿನದ ಪ್ರತಿಭಟನೆ ನಡೆಸಿದರು.
ಚಾಮರಾಜೇಶ್ವರ ದೇಗುಲದಿಂದ ಭುವನೇಶ್ವರಿ ವೃತ್ತದ ತನಕ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಹಾರೆ, ಪಿಕಾಸಿ, ಎಲ್ಕೊಟ್ಟು, ಬಾಂಡ್ಲಿ ಹಿಡಿದು ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ರೈತ ಸಮುದಾಯದ ಸಂಕೇತಗಳನ್ನ ಹಿಡಿದು ಪ್ರತಿಭಟನೆ ನಡೆಸಿದ ಹೋರಾಟಗಾರರು; ಕೃಷಿ ಕಾಯಕಕ್ಕೆ ನೀರಿಲ್ಲ,ಗುದ್ದಲಿ, ಪಿಕಾಸಿ, ಸಲಿಕೆಗಳು ನಿಷ್ಪ್ರಯೋಜಕ ಆಗಿವೆ, ನಮ್ಮ ನೀರು ತಮಿಳುನಾಡಿಗೆ ಹರಿಯುತ್ತಿರುವುದರಿಂದ ರೈತರಿಗೆ ಕೆಲಸವಿಲ್ಲವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಇದೇ ರೀತಿ ನೀರು ಹರಿಸುತ್ತಿದ್ದರೇ ಮುಂದಿನ ದಿನಗಳಲ್ಲಿ ರೈತರು ಗುಳೆ ಹೋಗಿ ಕೂಲಿ ಕೆಲಸ ಮಾಡಬೇಕಾಗುತ್ತದೆ, ರೈತರ ಹಿತವನ್ನು ರಾಜ್ಯ ಸರ್ಕಾರ ಬಲಿ ಕೊಡುತ್ತಿದೆ, ಕೇಂದ್ರ ಸರ್ಕಾರ ಮಾತನಾಡದೇ ಮೌನವಹಿಸಿ ನಾಟಕ ಆಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ರಾಷ್ಟ್ರೀಯ ಹೆದ್ದಾರಿಯನ್ನು ತಡೆದಿದ್ದರಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕಳೆದ 37 ದಿನಗಳಿಂದ ಚಾಮರಾಜನಗರದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ.


