ವರದಿ: ಅರವಿಂದ ಮಲ್ಲಿಗೆ, ಬೀದರ್
ಬೀದರ್/ಔರಾದ್: ಪರರ ಬಗ್ಗೆ ಕಾಳಜಿ, ರಂಜಾನ್ ಉಪವಾಸ ಸಂದರ್ಭದಲ್ಲಿ ನಮ್ಮಲ್ಲಿರುವಂತಹ ಸಹೋದರತ್ವ ಸಮಾಜದಲ್ಲಿ ಒಳಗೊಳ್ಳುವುದು ಆಗಿದೆ. ಇಫ್ತಾರ್ ಕೂಟದಲ್ಲಿ ಮುಸ್ಲಿಮರಷ್ಟೇ ಅಲ್ಲಾ ಗ್ರಾಮದ ಎಲ್ಲಾ ಧರ್ಮದ ಜನರನ್ನು ಸೇರಿಸಿಕೊಂಡು ಈ ಒಂದು ಇಫ್ತಾರ್ ಕೂಟ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರಾದ ಅಯುಬಖಾನ್ ಪಟೇಲ್ ಹೇಳಿದರು.
ಔರಾದ್ ತಾಲ್ಲೂಕಿನ ಬೋರ್ಗಿ (ಜೆ) ಗ್ರಾಮದ ಮಸೀದಿ ಆವರಣದಲ್ಲಿ ಗುರುವಾರ ಆಯೋಜಿಸಿರುವ ಸಾಮೂಹಿಕ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಮಾಜಿಕ ಜೀವನದಲ್ಲಿ ಸೌಹಾರ್ದಯುತವಾಗಿ ಬದುಕುವುದು ಹೇಗೆ ಎಂಬುದನ್ನು ಕಲಿತುಕೊಳ್ಳುವುದೇ ಇಫ್ತಾರ್ ಕೂಟದ ಉದ್ದೇಶವಾಗಿದೆ. ಪ್ರೀತಿ, ಭಾಂದವ್ಯ ಭ್ರಾತೃತ್ವ ಭಾವನೆಯನ್ನು ಮೂಡಿಸಲು ಈ ಇಫ್ತಾರ್ ಕೂಟವನ್ನು ಆಯೋಜನೆ ಮಾಡಲಾಗಿದೆ” ಎಂದು ಹೇಳಿದರು.
ಶಿಕ್ಷಕ ಬಸಿರೋದ್ದಿನ್ ಮಾತನಾಡಿ, ಒಬ್ಬ ವ್ಯಕ್ತಿಯನ್ನು ಅರಿಯಬೇಕೆಂದರೆ ಆ ವ್ಯಕ್ತಿಯ ಜೊತೆ ಬೆರೆತಾಗ ಮಾತ್ರ ಆ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ವ್ಯಕ್ತಿಯನ್ನು ಅರ್ಥ ಮಾಡಿಕೊಂಡರೆ ಸಮಾಜವನ್ನು ಅರ್ಥ ಮಾಡಿಕೊಂಡಂತೆ. ಸಮಾಜದಲ್ಲಿರುವ ಇತರ ಧರ್ಮೀಯರನ್ನು ಸೋದರತ್ವದಿಂದ ಕಾಣುವುದು ಮುಖ್ಯವಾಗಿದೆ ಎಂದರು.
ರಮ್ಜಾನ್ ತಿಂಗಳು ಅತ್ಯಂತ ವೈಶಿಷ್ಟ ಪೂರ್ಣವಾದ ಮಾಸವಾಗಿದ್ದು ಮುಸ್ಲಿಮರು ಅತ್ಯಂತ ಪ್ರಾಧಾನ್ಯತೆಯೊಂದಿಗೆ ರಮ್ಜಾನ್ ರೋಜಾ ನಡೆಸುತ್ತಾರೆ. ಈ ಪ್ರಯುಕ್ತ ನಡೆಯುವ ಇಫ್ತಾರ್ ಕೂಟಗಳು ಸಮಾಜಕ್ಕೆ ಸಾಮಾಜಿಕ ಸಾಮರಸ್ಯ ಸಂದೇಶ ಬೀರುವ ಆಚರಣೆಯಾಗಿದೆ. ಇಫ್ತಾರ್ ಕೂಟದ ಮೂಲಕ ಸಮಾಜದ ಎಲ್ಲ ವರ್ಗದ ಜನರ ನಡುವೆ ಸೌಹಾರ್ದತೆ ಬೀರಲು ಸಾಧ್ಯ ಎಂದರು.
ಶಾಮರಾವ ಜೈನಾಪುರೆ ಮಾತನಾಡಿ, ದೇವನೊಬ್ಬ ನಾಮ ಹಲವು ಎಂಬಂತೆ ನಾವೆಲ್ಲರೂ ಮನುಷ್ಯರೆಂಬ ಏಕತೆಯ ಭಾವನೆಯಲ್ಲಿ ಪ್ರೀತಿ, ಪ್ರೇಮ ಮತ್ತು ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದರು.
ಸುಮಾರು 200 ಕ್ಕಿಂತ ಹೆಚ್ಚು ಗ್ರಾಮದ ಎಲ್ಲಾ ಧರ್ಮದ ಜನರು ಮಸೀದಿಯಲ್ಲಿ ಭಾಗವಹಿಸಿ ಪರಸ್ಪರ ಸೌಹಾರ್ದತೆಯಿಂದ ಮುಸ್ಲಿಂ ಬಾಂಧವರೊಂದಿಗೆ ಭಾಗವಹಿಸಿ ಹಣ್ಣು ಹಂಪಲು ಸೇವನೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಪಿಕೆಪಿಎಸ್ ಸದಸ್ಯರಾದ ಘಾಳೆಪ್ಪ ವಿಳಸಪೂರೆ, ಬಸವರಾಜ ನೇಳಗೆ, ಫರೀದಖಾನ್ ಸಂಗಮೇಶ ಕೌಟಗೆ, ಮಾಳಪ್ಪ ಮೇತ್ರೆ, ಗಣಪತಿ ಕಾಂಬ್ಳೆ, ಮಾರುತಿ ಕೋಳಿ, ನರಸಪ್ಪಾ ಜಮಾದಾರ, ವಿರಶೇಟ್ಟಿ ಕೌಟಗೆ, ತಾಜ್ಜೋದಿನ್ ಅತ್ಮಲೆ, ಬಸಯ್ಯ ಸ್ವಾಮಿ, ಸಿದ್ದಪ್ಪಾ ಉಜ್ಜುಣಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಾವೆಲ್ಲರೂ ಮಾನವೀಯತೆ ಪರವಾಗಿ ಇರುವವರು. ಹಾಗಾಗಿಯೇ ಸೌಹಾರ್ದತೆಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸುಮಾರು ವರ್ಷಗಳಿಂದ ನಮ್ಮೂರಲ್ಲಿ ಆಯೋಜಿಸುವ ಇಫ್ತಾರ್ ಕೂಟದಲ್ಲಿ ಎಲ್ಲಾ ಧರ್ಮದವರು ಪ್ರೀತಿಯಿಂದ ಭಾಗವಹಿಸುವರು. ಮನುಷ್ಯನಲ್ಲಿ ಉತ್ತಮ ಗುಣಗಳಿದ್ದರೆ ಸಮಾಜ ಪ್ರಗತಿಯತ್ತ ಸಾಗುತ್ತದೆ. ಹಿಂದೂ, ಮುಸ್ಲಿಂ ಎಂಬ ಭೇದ ಮರೆತು ಎಲ್ಲರೂ ಮನುಷ್ಯರು ಎನ್ನುವ ಉದಾರ ಮನಸ್ಸಿನಿಂದ ಜೀವನಸಾಗಿಸಬೇಕು.
-ಅಯುಬಖಾನ್ ಪಟೇಲ್, ಗ್ರಾಮದ ಮುಖಂಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4