ತುಮಕೂರು: ಆಧುನಿಕತೆಯ ಸಂದರ್ಭದಲ್ಲಿ ಜಾತಿಯ ಉತ್ತುಂಗ ಮತ್ತು ಒಳಸುಳಿವು ಹೆಚ್ಚಿದೆ. ಮನುಷ್ಯನ ಅಂತರ್ಯದೊಳಗೆ ಜಾತಿಯ ಪರಾಕಾಷ್ಠೆ ಹೆಚ್ಚುತ್ತಿರುವುದರಿಂದಲೇ ಸಮಾಜದಲ್ಲಿ ವಿಘಟನೆಗಳು ಹೆಚ್ಚುತ್ತಿವೆ ಎಂದು ಲೇಖಕಿ ಎಂ.ಸಿ.ಲಲಿತ ವಿಷಾದಿಸಿದರು.
ತುಮಕೂರು ನಗರ ವರದಕ್ಷಿಣೆ ವಿರೋಧಿ ವೇದಿಕೆ–ಸಾಂತ್ವನ ಕೇಂದ್ರದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಚಿಂತನೆ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಒಬ್ಬ ವ್ಯಕ್ತಿ ಹೆಚ್ಚು ಹೆಚ್ಚು ತಿಳಿದುಕೊಂಡಂತೆಲ್ಲಾ, ಜಾತಿಯ ಸ್ವಾಭಿಮಾನಿಯಾಗುತ್ತಿದ್ದಾನೆ. ಕಲಿತವರು, ಉದ್ಯೋಗಿಗಳು ತಮ್ಮ ತಮ್ಮ ಜಾತಿಗೆ ಸೀಮಿತರಾಗುತ್ತಿದ್ದಾರೆ. ಹೀಗಾಗಿ ಜಾತಿ ಸಂಘಟನೆಗಳು ಸದೃಢವಾಗಿ ಬೆಳೆಯುತ್ತಿದ್ದು, ಭಾರತದಲ್ಲಿ ಇರುವಷ್ಟು ಜಾತಿಯ ಪ್ರಜ್ಞೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿಗೆ ಸೀಮಿತವಾಗಿ ಕೆಲಸ ಮಾಡಿದವರಲ್ಲ. ಅವರ ಸಂವಿಧಾನವನ್ನು ಎಲ್ಲರೂ ಅನುಭವಿಸುತ್ತಿದ್ದಾರೆ. ಮಹಿಳೆಯರಿಗೆ ಅವಕಾಶಗಳನ್ನು ಕಲ್ಪಿಸಿದ್ದೇ ಅಂಬೇಡ್ಕರ್ ಅವರು. ತಮ್ಮ ಸಂವಿಧಾನ ರಚನಾ ಸಮಿತಿಯಲ್ಲಿ ಮಹಿಳೆಯರನ್ನು ಸೇರಿಸಿಕೊಂಡು ಮುಂದಿನ ಭವಿಷ್ಯದ ಚಿಂತನೆಗಳನ್ನು ಅವರು ಆಗಲೇ ಕಾರ್ಯರೂಪಕ್ಕೆ ತಂದಿದ್ದರು. ಇದರ ಪರಿಣಾಮವಾಗಿ ಅವರ ಸಂವಿಧಾನದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಇಂತಹ ಧೀಮಂತ ನಾಯಕನನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಬಾಬು ಜಗಜೀವನರಾಂ ಪ್ರಶಸ್ತಿಗೆ ಭಾಜನರಾಗಿರುವ ನರಸೀಯಪ್ಪ ಅವರನ್ನು ಅಭಿನಂದಿಸಲಾಯಿತು. ಲೇಖಕಿ ಬಾ.ಹ. ರಮಾಕುಮಾರಿ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


