ತುಮಕೂರು ನಗರದಲ್ಲಿರುವ ಸರಕಾರಿ ಚಿತ್ರಕಲಾ ಪದವಿ ಕಾಲೇಜಿನಲ್ಲಿ 77ನೇ ಸ್ವಾತಂತ್ರೋತ್ಸವವನ್ನು ಚಿತ್ರಕಲಾ ಪ್ರದರ್ಶನ ಏರ್ಪಡಿಸುವ ಮೂಲಕ ಆಚರಿಸಲಾಯಿತು. ಇದೇ ವೇಳೆ ಕಾಲೇಜಿನಲ್ಲಿ ಕಲಿಯುತ್ತಿರುವ ಬಿ.ವಿ.ಎ ಪದವಿ ವಿದ್ಯಾರ್ಥಿಗಳು ತಾವೇ ರಚಿಸಿದ ವಿವಿಧ ವರ್ಣ ಚಿತ್ರಗಳನ್ನು ಕಾಲೇಜಿನಲ್ಲಿ ಪ್ರದರ್ಶಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಸಿ.ಸಿ.ಬಾರಕೇರರವರು, ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ನಮ್ಮ ಹಕ್ಕು ಹಾಗಂತ ಸ್ವೇಚ್ಛೆಯಿಂದ ಬಾಳದೆ ಪರಧರ್ಮ- ಸಹಿಷ್ಣುತೆ, ವಿವಿಧ ಭಾಷೆ, ಸಂಸ್ಕೃತಿ, ಧಾರ್ಮಿಕ ಆಚರಣೆಗಳನ್ನು ಹಾಗೂ ದೇಶದ ಕಲಾ ಪರಂಪರೆಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಸಹಕರಿಸಬೇಕು ಎಂದರು.
ಚಿತ್ರಕಲಾ ಪ್ರದರ್ಶನದ ಉದ್ಘಾಟಕರಾಗಿ ಆಗಮಿಸಿದ ತುಮಕೂರಿನ ಹಿರಿಯ ಚಿತ್ರಕಲಾವಿದರು ಹಾಗೂ ನಿವೃತ್ತ ಶಿಕ್ಷಕರಾದ ಎಂ.ಎನ್. ಸುಬ್ರಹ್ಮಣ್ಯ ಮಾತನಾಡಿ, ಕಲಾ ವಿದ್ಯಾರ್ಥಿಗಳು ಸಾಹಿತ್ಯಾಭ್ಯಾಸವನ್ನು ರೂಢಿಸಿಕೊಂಡು ಅರ್ಥಪೂರ್ಣ ಕಲಾಕೃತಿಗಳನ್ನು ರಚಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಹಾಗೂ ನಮ್ಮತುಮಕೂರು ವಾಹಿನಿಯ ಸಂಸ್ಥಾಪಕರಾದ ನಟರಾಜು ಜಿ.ಎಲ್. ಮಾತನಾಡಿ, ನಾನು ಸಹ ಇದೇ ಕಾಲೇಜಿನಲ್ಲಿ ಓದಿದ್ದೇನೆ. ನಾವು ಕಲಿಯುವ ಸಂದರ್ಭದಲ್ಲಿ ಈಗಿನ ವಿದ್ಯಾರ್ಥಿಗಳಿಗೆ ಸಿಕ್ಕಿರುವ ಉತ್ತಮ ಶಿಕ್ಷಕರು ಮತ್ತು ಪ್ರದರ್ಶನ ಏರ್ಪಡಿಸುವಂತಹ ಅವಕಾಶಗಳು ನಮಗೆ ಲಭಿಸಲಿಲ್ಲವಲ್ಲ ಎಂಬ ಕೊರಗು ಇದೆ. ನಿಮ್ಮ ಕಲಾಕೃತಿಗಳಲ್ಲಿ ಪ್ರಬುದ್ಧತೆ ಕಾಣಿಸುತ್ತಿದೆ. ಈ ಕಾಲೇಜಿನ ಅಭಿವೃದ್ಧಿಗಾಗಿ ನಮ್ಮ ಸಂಘದ ಸದಸ್ಯರು ಸದಾ ಸಿದ್ದರಾಗಿರುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಿ.ಸಿ. ಬಾರಕೇರ ಮಾತನಾಡಿ, ಸತತ ಪರಿಶ್ರಮಗಳಿಂದ ವಿದ್ಯಾರ್ಥಿಗಳು ಕಲಾ ಪ್ರೌಢಿಮೆ ಹೆಚ್ಚಿಸಿಕೊಳ್ಳಬೇಕು. ಜೊತೆಗೆ ಸಂವಹನ ಕಲೆ, ವಿವಿಧ ಭಾಷೆಗಳ ಪ್ರೌಢಿಮೆ ಬೆಳೆಸಿಕೊಳ್ಳಬೇಕು. ಕಲಾಕೃತಿಗಳು ತೆರೆದ ಪುಸ್ತಕಗಳಂತೆ ಅವುಗಳನ್ನು ನೋಡುಗರು ಕುತೂಹಲದಿಂದ ನೋಡುವಂತೆ ಕಲಾಕೃತಿಗಳಲ್ಲಿ ಸೃಜನಶೀಲತೆ ರೂಡಿಸಿಕೊಳ್ಳಬೇಕು ಎಂದರು.
ಈ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳು ವ್ಯಕ್ತಪಡಿಸಿದರು. ಅವರೆಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಪ್ರಾರಂಭದಲ್ಲಿ ಕುಮಾರಿ ಶ್ರೀವಿದ್ಯಾ ಟಿ. ಎಸ್. ಪ್ರಾರ್ಥನೆ ಗೀತೆ ಹಾಡಿದರು. ಅತಿಥಿ ಉಪನ್ಯಾಸಕರಾದ ರಂಗಸ್ವಾಮಿ ಆರ್. ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಅತಿಥಿ ಉಪನ್ಯಾಸಕರಾದ ಡಾ. ಶಿವಕುಮಾರ್ ಎಸ್. ಸಿಂಗೆ ಕಾರ್ಯಕ್ರಮ ನಿರೂಪಿಸಿದರು. ಕೊನೆಗೆ ಕಂಪ್ಯೂಟರ್ ಶಿಕ್ಷಕರಾದ ಸತ್ಯನಾರಾಯಣ್ ಟಿ.ಎಸ್ ವಂದಿಸಿದರು. ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾದ ವಿಶ್ವೇಶ್ವರ ಪಟಗಾರ, ವೆಂಕಟಲಕ್ಷ್ಮಿ ಸೇರಿದಂತೆ ಪಾಲಕರು ನಾಗರಿಕರು ಭಾಗವಹಿಸಿದ್ದರು.