ತುಮಕೂರು: ನಗರದ ಮಧುಗಿರಿ–ಪಾವಗಡ ಪ್ರಮುಖ ರಸ್ತೆಯಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳು ಹಾಗೂ ಜೀವಹಾನಿ ಪ್ರಕರಣಗಳಿಗೆ ಕೆ.ಶಿಪ್, ಮಹಾನಗರ ಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಂಭೀರ ನಿರ್ಲಕ್ಷ್ಯವೇ ನೇರ ಕಾರಣವಾಗಿದೆ. ರಸ್ತೆಗಳ ದುರಾವಸ್ಥೆ, ಸಮರ್ಪಕ ರಸ್ತೆ ದೀಪಗಳ ಕೊರತೆ, ಎಚ್ಚರಿಕೆ ಹಾಗೂ ದಿಕ್ಕು ಸೂಚನಾ ಫಲಕಗಳಿಲ್ಲದಿರುವುದು, ರಸ್ತೆಯ ಮಧ್ಯೆ ಡಿವೈಡರ್ ವ್ಯವಸ್ಥೆ ಇಲ್ಲದಿರುವುದು ಹಾಗೂ ಮಳೆಗಾಲದಲ್ಲಿ ನೀರು ನಿಲ್ಲುವ ಸಮಸ್ಯೆಗಳಿಂದ ವಾಹನ ಸವಾರರು ಪ್ರತಿದಿನ ಜೀವ ಭಯದಲ್ಲೇ ಸಂಚರಿಸುವಂತಾಗಿದೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಉಮೇಶ್ ಖಂಡಿಸಿದರು.
ಸಾರ್ವಜನಿಕರ ಜೀವ ಭದ್ರತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಸಂಬಂಧಿತ ಇಲಾಖೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಂತರಸನಹಳ್ಳಿ ಸೇತುವೆ ಬಳಿ ಮೇ 16ರ(ಶನಿವಾರ) ಸಂಜೆ 5 ಗಂಟೆಗೆ ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಸ್ಥಳೀಯ ಮುಖಂಡ ಯಲ್ಲಪ್ಪ ಮಾತನಾಡಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ದೀಪಗಳ ಕೊರತೆಯಿಂದ ರಾತ್ರಿ ವೇಳೆ ವಾಹನ ಸಂಚಾರ ಅತ್ಯಂತ ಅಪಾಯಕಾರಿಯಾಗಿದೆ. ಕೂಡಲೇ ಹೆಚ್ಚಿನ ಬೆಳಕು ನೀಡುವ ರಸ್ತೆ ದೀಪಗಳನ್ನು ಅಳವಡಿಸಿ, ಅಪಾಯಕಾರಿ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಒಂದು ತಿಂಗಳೊಳಗೆ ಸಮಸ್ಯೆ ಪರಿಹರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಮಾತನಾಡಿ, ಇತ್ತೀಚೆಗೆ ನಡೆದ ದುರ್ಘಟನೆಯಲ್ಲಿ ಜೀವಹಾನಿಯಾಗಿರುವುದು ಸಾರ್ವಜನಿಕರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಹಂಪ್ಸ್ ಗಳಿಗೆ ರೇಡಿಯಂ ಸೂಚನಾ ಫಲಕಗಳಿಲ್ಲದಿರುವುದು ಹಾಗೂ ಎಚ್ಚರಿಕೆ ಫಲಕಗಳ ಕೊರತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಸಂಬಂಧಿತ ಇಲಾಖೆಗಳು ತಕ್ಷಣ ಜಂಟಿ ಸಭೆ ನಡೆಸಿ ವೈಜ್ಞಾನಿಕ ರೀತಿಯಲ್ಲಿ ರಸ್ತೆ ದುರಸ್ತಿ ,ಬಸ್ ನಿಲ್ದಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಹಾನಗರ ಪಾಲಿಕೆ ಜೆ.ಇ. ಹರೀಶ್ ಮನವಿ ಸ್ವೀಕರಿಸಿ, ಆಯುಕ್ತರ ಗಮನಕ್ಕೆ ತಂದು ಸಂಬಂಧಿತ ಇಲಾಖೆಗಳ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದೇ ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ನಗರ ಸಮಿತಿ ಸದಸ್ಯರಾದ ರಂಗಧಾಮಯ್ಯ, ಗೌಡ, ನಾಗರಿಕ ಹಿತರಕ್ಷಣಾ ಸಮಿತಿಯ ಶಿವಕುಮಾರ್, ರಾಮಕೃಷ್ಣ, ಖಲೀಲ್, ನಾಗಭೂಷಣ, ತಿಪ್ಪೇಸ್ವಾಮಿ, ಆನಂದ್, ಶಶಿಕರಣ್, ರಾಮಣ್ಣ, ಮಾಗರಾಜು, ಶ್ರೀನಿವಾಸ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


