ತುಮಕೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು ಇಲ್ಲಿ ಸಮಾಜಶಾಸ್ತ್ರ ವಿಭಾಗ ಮತ್ತು ಐ.ಕ್ಯೂ.ಎ.ಸಿ. ಸಹಯೋಗದೊಂದಿಗೆ “ಸೋಶಿಯಾಲಜಿ ಸಿನರ್ಜಿ” ಎಂಬ ಅಂತರ್ ಕಾಲೇಜು ಸಮಾಜಶಾಸ್ತ್ರ ವಿಷಯದ ವಿನಿಮಯ ಉಪನ್ಯಾಸ ಮಾಲೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ.ವಿಜಯಲಕ್ಷ್ಮೀ ಎನ್., ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧುಗಿರಿ ಇವರು ಲಿಂಗತ್ವವು ಆರೋಗ್ಯದ ಸಾಮಾಜಿಕ ನಿರ್ಧಾರಕಾಂಶ: ಸಮಸ್ಯೆಗಳು ಮತ್ತು ಸವಾಲಗಳು ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಸಮಾಜದಲ್ಲಿ ಸ್ತ್ರೀಯರ ಆರೋಗ್ಯಕ್ಕೆ ದ್ವಿತೀಯ ಸ್ಥಾನ ನೀಡಲಾಗುತ್ತದೆ. ಲಿಂಗತ್ವವು ಕೇವಲ ಜೈವಿಕ ಆಯಾಮವನ್ನಷ್ಟೇ ಹೊಂದಿರದೆ ಮಾನಸಿಕ ಹಾಗೂ ಸಾಮಾಜಿಕ ಆಯಾಮವನ್ನು ಒಳಗೊಂಡಿರುತ್ತದೆ. ಸಮಾಜದಲ್ಲಿ ಲಿಂಗತಾರತಮ್ಯ ಕಂಡು ಬರುತ್ತದೆ. ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳಿಗಿಂತ ಹೆಚ್ಚು ಪ್ರಾಶಸ್ತ್ರ ನೀಡುವುದು, ಸ್ತ್ರೀಯರು ಅಡುಗೆ ಮಾಡುವುದು, ಅತಿಥಿ ಸತ್ಕಾರ, ಮಕ್ಕಳ ಪಾಲನೆ, ವಿಟಮಿನ್ಯುಕ್ತ ಆಹಾರದ ಸೇವನೆಯ ಕೊರತೆ, ಪುರುಷರ ಊಟದ ನಂತರ ಉಳಿದ ಆಹಾರ ಸೇವಿಸುವ ಪದ್ಧತಿ ಗರ್ಭ ನಿರೋಧಕಗಳ ಬಳಕೆ, ಮುಂತಾದವುಗಳಿಂದ ಸ್ತ್ರೀಯರ ಆರೋಗ್ಯದ ನಿರ್ಲಕ್ಷವಾಗುತ್ತದೆ. ಸ್ತ್ರೀಯರ ಸಾವುಗಳು ಸಂಭವಿಸುತ್ತಿದ್ದು ಸ್ತ್ರೀಯರ ಸಂಖ್ಯೆ ಕುಸಿಯುತ್ತಿದೆ. ಲಿಂಗತಾರತಮ್ಯವು ಸ್ತ್ರೀಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಸ್ತ್ರೀ ಸಮಾನತೆಯು ಸ್ತ್ರೀಯ ಆರೋಗ್ಯವನ್ನು ವೃದ್ಧಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ.ತಿರುಮಲೇಶ ಬಾಬು ಟಿ. ಆರ್, ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಡವನಹಳ್ಳಿ ಇವರು ಸಮಾಜದ ಮೇಲೆ ಜನಸಂಖ್ಯೆ ಪರಿಣಾಮ : ಸಮಸ್ಯೆಗಳು ಮತ್ತು ಸವಾಲಗಳು ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಜನಸಂಖ್ಯಾ ಸ್ಪೋಟವು ಒಂದು ಬೃಹತ್ ಸಾಮಾಜಿಕ ಸಮಸ್ಯೆಯಾಗಿದ್ದು ಇದು ಸಾಮಾಜಿಕ ಸಮಸ್ಯೆಗಳ ಸರಮಾಲೆಯನ್ನೆ ಸೃಷ್ಟಿಸುತ್ತದೆ. ಜನಸಂಖ್ಯಾ ಸ್ಫೋಟವು ಯಾವುದೇ ದೇಶದ ಆರ್ಥಿಕತೆಗೆ ಮಾರಕವಾಗಬಹುದು. ಇಂದು ಹಲವು ರಾಷ್ಟ್ರಗಳು ಜನಸಂಖ್ಯಾ ಸ್ಫೋಟದ ಸಮಸ್ಯೆಯನ್ನು ಎದುರಿಸುತಿದ್ದು ಆರ್ಥಿಕವಾಗಿ ದುಸ್ಥಿತಿಗೆ ತಲುಪಿವೆ. ನಾಗರೀಕರು ಮೂಲಭೂತ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಹಲವು ದೇಶಗಳು ನಾಗರಿಕರಿಗೆ ಜನಸಂಖ್ಯಾ ನಿಯಂತ್ರಣದ ಅರಿವು ಹಾಗೂ ನಿಯಂತ್ರಣದಿಂದ ಉಂಟಾಗುವ ಅನುಕೂಲಗಳನ್ನು ತಿಳಿಸಿಕೊಡಬೇಕಾಗುತ್ತದೆ. ನಿಯಮಗಳ ಪಾಲನೆ ಮಾಡುವಂತೆ ಪ್ರೇರೆಪಿಸುವ ಜವಾಬ್ದಾರಿ ಮತ್ತು ಸವಾಲು ಸಮಾಜದ ಮುಂದಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನಾಡುತ್ತಾ ಡಾ.ಅಶ್ವಾಖ್ ಅಹಮದ್, ಮುಖ್ಯಸ್ಥರು ಸಮಾಜಶಾಸ್ತ್ರ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು ಮಾತನಾಡುತ್ತಾ, ಇಂದು ನಮ್ಮ ಕಾಲೇಜಿನಲ್ಲಿ ಸಾಮಾಜಿಕ ವಿಷಯಗಳ ಚಿಂತನ ಮಂಥನ ಕಾರ್ಯ ನಡೆಯುತ್ತಿದೆ. ಇಂದು ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ಮತ್ತು ಸಾಮಾಜಿಕ ಜ್ಞಾನಗಳೆರಡರ ಕೊರತೆಯು ಕಂಡು ಬರುತ್ತಿದೆ. ಇದಕ್ಕೆ ಮೂಲ ಕಾರಣ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಅರಿವಿನ ಕೊರತೆ ಎದ್ದು ಕಾಣುತ್ತಿರುವುದೆ ಆಗಿದೆ. ವಿದ್ಯಾರ್ಥಿಗಳು ಇಂದು ಕೇವಲ ಅಂಕಗಳಿಸಲು ಮತ್ತು ಪದವಿ ಪಡೆದಿಕೊಳ್ಳಲಷ್ಠೆ ಸೀಮಿತರಾಗಿದ್ದಾರೆ. ಶಿಕ್ಷಕರು ತಮ್ಮ ಜವಾಬ್ದಾರಿ ಪೂರ್ಣಗೊಳಿಸುವ ಅನಿವಾರ್ಯತೆಯನ್ನು ಹೊಂದಿದ್ದಾರೆ. ವಿಶೇಷ ಹಾಗೂ ವ್ಯವಸ್ಥಿತ ಅಧ್ಯಯನದಿಂದ ಮಾತ್ರ ಉತ್ತಮ ಜ್ಞಾನ ಪಡೆಯಲು ಸಾಧ್ಯ. ವ್ಯವಸ್ಥಿತ ಜ್ಞಾನದಿಂದ ಉತ್ತಮ ಆವಿಷ್ಕಾರಗಳು ಸಾಧ್ಯ. ಉತ್ತಮ ಆವಿಷ್ಕಾರಗಳು ಸಮಾಜ ಕಲ್ಯಾಣಕ್ಕೆ ದಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಇಂದಿನ ಶಿಕ್ಷಣ ಕೇವಲ ಅಂಕಗಳಿಸಲು, ಪದವಿ ಪಡೆಯಲಷ್ಠೆ ಸೀಮಿತವಾಗಬಾರದು, ಜ್ಞಾನಾರ್ಜನೆಯ ಶಾಖೆಗಳಾಗಿ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಪ್ರೊ.ವಸಂತ ಟಿ.ಡಿ. ರವರು ಮಾತನಾಡುತ್ತಾ, ಕಾಲೇಜಿನ ಸಮಾಜಶಾಸ್ತ್ರ ವಿಭಾಗವು ವಿವಿಧ ಕಾಲೇಜುಗಳ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸಮಸ್ಯೆಗಳ ಅರಿವು ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಸಮಾಜ ನಾಶವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಾ.ಯೋಗೀಶ್, ಡಾ.ತಿಪ್ಪೇಸ್ವಾಮಿ ಜಿ., ಡಾ.ಮಲ್ಲೇಶಪ್ಪ, ಡಾ.ನಾರಾಯಣಸ್ವಾಮಿ, ಡಾ.ಶಿವಲಿಂಗಮೂರ್ತಿ ಹಾಜರಿದ್ದರು.
ಪ್ರಾರ್ಥನೆಯನ್ನು ಲಕ್ಷ್ಮೀ ಮತ್ತು ಸಂಗಡಿಗರು ನೆರವೇರಿಸಿದರು. ಪುನೀತ್ ರವರು ಸ್ವಾಗತಿಸಿದರು, ಕಾರ್ತಿಕ್ರವರು ಎಲ್ಲರಿಗೂ ವಂದಿಸಿದರೆ ಸುರೇಖಾರವರು ಕಾರ್ಯಕ್ರಮ ನಿರೂಪಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD