ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಉತ್ತರ ಕರ್ನಾಟಕದ ಭಾಗಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ. ಆದರೆ ಅವರ ಕೊಡುಗೆ ಏನೂ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಶುಕ್ರವಾರ ಕಲಬುರಗಿಯಲ್ಲಿ ನಡೆದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಲ್ಲಿರುವ ಕಾರ್ಖಾನೆ, ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಮೋದಿ ಸ್ಥಗಿತಗೊಳಿಸಿದ್ದಾರೆ ಎಂದು ಟೀಕಿಸಿದರು.
ದೆಹಲಿಯಂತೆ ಇಲ್ಲಿಯೂ ಒಂದು ಏಮ್ಸ್ ನಿರ್ಮಿಸುವಂತೆ ನಾನು ಪ್ರಧಾನಿಯವರಿಗೆ ಕೇಳಿದ್ದೆ. ಆದರೆ ಪ್ರಧಾನಿಯವರು ನಿರಾಕರಿಸಿದರು. ಸ್ವತಃ ನಾನು ಇಲ್ಲಿ ಇಎಸ್ಐ ಆಸ್ಪತ್ರೆ ಮಾಡಿಸಿದ್ದೇನೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಒಂದೇ ಒಂದು ಕೆಲಸ ಹೈದ್ರಾಬಾದ್ ಕರ್ನಾಟಕಕ್ಕಾಗಲೀ, ಕಲ್ಯಾಣ ಕರ್ನಾಟಕಕ್ಕಾಗಲೀ ಮಾಡಿಲ್ಲ ಎಂದು ಹೇಳಿದರು. ನಾವು ಹೇಳಿದ್ದ ಐದು ಗ್ಯಾರೆಂಟಿ ಯೋಜನೆಗಳನ್ನು ನಾವು ನೀಡಿದ್ದೇವೆ. ಆದರೆ ಪ್ರಧಾನಿ ಮೋದಿ ಹೋದಲ್ಲಿ ಬಂದಲ್ಲಿ ಮೋದಿಜಿ ಗ್ಯಾರೆಂಟಿ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ನಾವು ನೀಡಿದ್ದ ಗ್ಯಾರೆಂಟಿಗಳು ಜನರನ್ನು ಮುಟ್ಟುತ್ತಿದೆ. ಆದರೆ ಪ್ರಧಾನಿ ಗ್ಯಾರೆಂಟಿ ಯಾವುದಾದರೂ ಜಾರಿಯಾಗಿದೆಯೇ ಎಂದು ಖರ್ಗೆ ಟೀಕಿಸಿದರು.
ನಾನು ಮಂತ್ರಿಯಾಗಿದ್ದ ಐದು ವರ್ಷದಲ್ಲಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳಲ್ಲಿ ಹತ್ತು ಪೈಸೆಯಷ್ಟಾದರೂ ಸಹ ಪ್ರಧಾನಿ ಮೋದಿ ಮಾಡಿದ್ದರೆ ನಾನು ಶಭಾಷ್ ಗಿರಿ ನೀಡುತ್ತಿದ್ದೆ ಎಂದು ಖರ್ಗೆ ಹೇಳಿದರು. ಬಡಜನರ ಹೊಟ್ಟೆಗೆ ಅನ್ನ ಇಲ್ಲ ಎಂದು ಸೋನಿಯಾ ಗಾಂಧಿಯವರು ಆಹಾರ ಭದ್ರತೆಯನ್ನು ಜಾರಿಗೆ ತಂದರು ಎಂದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ನಮ್ಮ ಐದು ಗ್ಯಾರೆಂಟಿಗಳು ಜನರನ್ನು ತಲುಪುತ್ತಿದೆ. ಇದಕ್ಕಿಂತ ನಮಗೆ ಬೇರೆ ಯಾವ ಪ್ರಚಾರವೂ ಬೇಕಿಲ್ಲ. ಪವಿತ್ರ ದಿನದಂದು ನಾವು ರಾಧಾಕೃಷ್ಣ ಅವರ ನಾಮಪತ್ರ ಸಲ್ಲಿಸಿದ್ದು, ಕನಿಷ್ಠ ಮೂರು ಲಕ್ಷ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


