ಗುಬ್ಬಿ: ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಆಹಾರ ಪದಾರ್ಥಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗದಿರುವುದು ದುರಾದೃಷ್ಟಕರ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.
ಚೇಳೂರಿನಲ್ಲಿ ನಡೆದ ಪೋಷಣೆ ಅಭಿಯಾನದಲ್ಲಿ ಮಾತನಾಡಿದ ಅವರು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಹೆಚ್ಚಿನ ಪೋಷಕಾಂಶ ಅಗತ್ಯವಿದ್ದು, ಸಾವಯವ ಪದ್ಧತಿಯಲ್ಲಿ ಬೆಳೆಯುವ ಹಣ್ಣು ತರಕಾರಿಗಳನ್ನು ಬಳಸುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಈ ಹಿಂದೆ ಕೊಟ್ಟಿಗೆ ಗೊಬ್ಬರ ಬಳಸಿ ಆಹಾರ ಪದಾರ್ಥಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚಿಗೆ ಇಳುವರಿಗೆ ಆದ್ಯತೆ ನೀಡಿ ಗುಣಮಟ್ಟವನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು.
ಮಹಿಳಾ ಮತ್ತು ಸಮಾಜ ಕಲ್ಯಾಣ ಇಲಾಖೆ ಡಿ.ಡಿ. ಸಿದ್ದರಾಮಣ್ಣ ಮಾತನಾಡಿ, ಗರ್ಭಿಣಿಯರು, ತಾಯಂದಿರು ಜಂಕ್ ಫುಡ್ ಆಸೆಗೆ ಆರೋಗ್ಯ ಹಾಳು ಮಾಡಿಕೊಳ್ಳದೆ, ಮನೆಯಲ್ಲಿಯೇ ತಯಾರಿಸುವ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ತಾಲ್ಲೂಕು ಆರೋಗ್ಯಧಿಕಾರಿ ಬಿಂಧು ಮಾಧವ್ ಮಾತನಾಡಿ, ಹಣದಿಂದ ಆರೋಗ್ಯ ಕೊಂಡುಕೊಳ್ಳಲು ಸಾಧ್ಯವಿಲ್ಲದಿರುವುದರಿಂದ ಗುಣಮಟ್ಟದ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಅನೇಕ ರೋಗಗಳ ತಡೆಗಟ್ಟಲು ಸಾಧ್ಯ ಎಂದರು.
ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನಪ್ರಾಶನ ನಡೆಯಿತು. ಸಿಡಿಪಿಒ ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಜಿಲ್ಲಾ ನಿರೂಪಣಾಧಿಕಾರಿ ಅಂಬಿಕಾ, ವೃತ್ತದ ಮೇಲ್ವಿಚಾರಕ್ಕೆ ನೇತ್ರಾವತಿ, ಚೇಳೂರು ಶಿವನಂಜಯ್ಯ, ರಂಗ ರಾಮಯ್ಯ, ಅಂಗನವಾಡಿ ಕಾರ್ಯಕರ್ತರು, ಮಕ್ಕಳು, ಪೋಷಕರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC