ಸಿರಾ: ರಸ್ತೆಯಲ್ಲಿ ಗುಂಡಿ ತೆಗೆದು ನಗರಸಭೆ ಅಧಿಕಾರಿಗಳು ಕೆಲವೊಂದಿಷ್ಟು ಕಾಟಾಚಾರದ ಕಾಮಗಾರಿ ನಡೆಸಿ ಹಾಗೆ ಬಿಟ್ಟಿದ್ದು, ಇದರಿಂದಾಗಿ ರಸ್ತೆ ಸಂಚಾರ ಸುರಕ್ಷತೆ ಇಲ್ಲದಂತಾಗಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.
ಸಿರಾದ ಅಮರಾಪುರ ರಸ್ತೆಯಲ್ಲಿ ನೀರು ಸರಬರಾಜು ಮಾಡುವ ಪೈಪ್ ಲೈನ್ ಕಾಮಗಾರಿಗೆ ರಸ್ತೆ ಬದಿಯನ್ನು ಅಗೆದು ಬೃಹತ್ ಗುಂಡಿ ಮಾಡಲಾಗಿದೆ. ಕಾಮಗಾರಿ ನಡೆದು ವಾರಗಳು ಕಳೆದರೂ, ಅತ್ತ ಕೆಲಸ ಪೂರ್ಣಗೊಳ್ಳುವುದೂ ಕಾಣುತ್ತಿಲ್ಲ ಇತ್ತ ರಸ್ತೆಬದಿಯಲ್ಲಿ ಕನಿಷ್ಠ ಬ್ಯಾರಿಕೇಡ್ ಆದದರೂ ಬಳಸುವುದು ಕಾಣುತ್ತಿಲ್ಲ ಎಂದು ಅಧಿಕಾರಿಗಳ ಮತ್ತು ಗುತ್ತಿಗೆ ದಾರರ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿರಾ ನಗರದಿಂದ ಆಂಧ್ರಪ್ರದೇಶ ಗಡಿ ಮತ್ತು ತಾಲ್ಲೂಕಿನ ವಿವಿಧ ಊರುಗಳಿಗೆ ಹಾದು ಹೋಗುವ ಮತ್ತು ಸದ್ಯ ಪ್ರತಿಷ್ಠಿತ ರಸ್ತೆ ಎಂದೇ ಕರೆಯಲಾಗುತ್ತಿರುವ ರಸ್ತೆಯಲ್ಲಿ ಇಂತಹದ್ದೊಂದು ಸ್ಥಿತಿ ಕಂಡು ಬಂದಿದೆ. ಈ ರಸ್ತೆಯಲ್ಲಿ ಮಾಜಿ ಸಚಿವರು, ನಗರ ಸಭೆ ಅಧಿಕಾರಿಗಳು ದಿನನಿತ್ಯ ಪ್ರಯಾಣಿಸುತ್ತಿದ್ದರೂ, ಯಾರಿಗೂ ಇದೊಂದು ಅಪಾಯ ಅನ್ನಿಸದಿರುವುದು ಸೋಜಿಗವಾಗಿದೆ.
ತಾಂತ್ರಿಕ ಕಾರಣಕ್ಕೆ ಗುಂಡಿಯನ್ನು ಮುಚ್ಚುವ ಕೆಲಸ ವಿಳಂಬವಾಗುತ್ತಿದ್ದು, ಇದೀಗ ಮಳೆಯೂ ಸಮೀಪಿಸುತ್ತಿದೆ. ಈ ನಡುವೆ ರಸ್ತೆ ಬದಿಯಲ್ಲಿ ಕೊರೆಯಲಾಗಿರುವ ಬೃಹತ್ ಗುಂಡಿ, ಜನರ ಪ್ರಾಣ ಬಲಿಗಾಗಿ ಕಾದುಕುಳಿತಂತೆ ಕಂಡು ಬರುತ್ತಿದೆ.
ಯಾವ ಕಾರಣಕ್ಕಾಗಿ ಈ ರೀತಿಯ ಕಾಮಗಾರಿಯನ್ನು ನಡೆಸುತ್ತಿದ್ದಾರೋ ಗೊತ್ತಿಲ್ಲ. ಸಮರ್ಪಕ ಕೆಲಸ ಮಾಡಲು ಸಾಧ್ಯವಿಲ್ಲವಾದರೆ, ಯಾಕೆ ಇಂತಹ ಕೆಲಸಕ್ಕೆ ಕೈ ಹಾಕಬೇಕು. ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಒಂದಿಷ್ಟು ಕಾಮಕಾರಿಗಳನ್ನು ನಡೆಸಲಾಗಿದೆ. ಕೆಲವೆಡೆ ಅರ್ಧಂಬರ್ಧ ಕೆಲಸ ಮಾಡಿ ಹಾಗೆಯೇ ಬಿಡಲಾಗಿದೆ. ಜನರನ್ನು ಕೊಲ್ಲಲು ರಸ್ತೆ ಬದಿಯಲ್ಲಿ ಗುಂಡಿ ತೆಗೆದಿಟ್ಟಿದ್ದೀರಾ? ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ತೀವ್ರವಾಗಿ ಆಕ್ರೋ ಶ ವ್ಯಕ್ತಪಡಿಸಿದ್ದಾರೆ.
ವರದಿ: ಎ.ಎನ್ .ಪೀರ್ , ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5