ಊರುಕೇರಿಯ ಬೀದಿಗಳಲ್ಲಿ ಮನೆ ಬಾಗಿಲುಗಳಿಗೆ ಕತ್ತೆಯನ್ನು ಕರೆತಂದು ಹಸಿಬಿಸಿ ಕತ್ತೆ ಹಾಲನ್ನು ಎಳೆಮಕ್ಕಳಿಗೆ ಕರೆದು ಕೊಡುವ ಕತ್ತೆ ಹಾಲಿನ ವಹಿವಾಟು ಇತ್ತೀಚಿಗೆ ಜನಪ್ರಿಯವಾಗುತ್ತಿದೆ.
ಆಂಧ್ರಪ್ರದೇಶದ ಅದಿಲಾಬಾದ್ ಜಿಲ್ಲೆಯ ಸೈಬು ಎಂಬ ಯುವಕ ಹೇಳುವ ಪ್ರಕಾರ ಒಂದು ಲೀಟರ್ ಕತ್ತೆ ಹಾಲಿನ ಬೆಲೆ ₹.10000. ಇವನ ಕಡೆಯ ನಾಲ್ಕಾರು ಕುಟುಂಬಗಳು ಸುಮಾರು ಇಪ್ಪತ್ತು ಕರೇವು ಕತ್ತೆಗಳ ಮಂದೆಯನ್ನು ದಟ್ಟಿದಾವಣಿ ಹಾಕಿಕೊಂಡು, ಕತ್ತೆಗಳ ಮೇಲೆಯೇ ತಮ್ಮ ಸಂಸಾರದ ಅಗತ್ಯ ಗಂತೆಗಬಾಳ ಹೇರುಹಾಕಿಕೊಂಡು ಬೆಂಗಳೂರಿಗೆ ಬಂದು ತಾತ್ಕಾಲಿಕವಾಗಿ ವಸ್ತಿ ಮಾಡಿಕೊಂಡಿದ್ದಾರೆ. ಖಾಲಿ ನಿವೇಶನ ವಿಸ್ತಾರದಲ್ಲಿ ಬಿಡದಿ ಬಿಟ್ಟಿರುವ ಕತ್ತೆಗಳಿಗೆ ಹಾಲಿನ ವಹಿವಾಟಿನಿಂದ ಗಳಿಸುವ ಹಣದಿಂದಲೇ ಹುಲ್ಲು ಹುರುಳಿ ಇಂಡಿ ಹೊಟ್ಟು ಖರೀದಿಸಿ ಮೇಯಿಸುತ್ತಾರೆ.
ನಾವು ಕತ್ತೆಹಾಲನ್ನು ಶೆಟ್ಟಿಹಾಲು ಎಂದು ಕರೆಯುತ್ತೇವೆ. ಕತ್ತೆ ಹಾಲು ಕುಡಿದವರಿಗೆ ಸ್ಯಾನೆ ಜೀರ್ಣಶಕ್ತಿ ಬರುತ್ತದೆಯಂತೆ. ನಮ್ಮೂರಿನಲ್ಲಿ ಸುಣ್ಣಕಲ್ಲು ಮಾರಾಟ ಮಾಡುತ್ತಿದ್ದ ಸುಗಾಲಿ(ಬಂಜಾರ)ಯರ ಕತ್ತೆಗಳಿಂದ ಹಾಲು ಹಿಂಡಿಸಿಕೊಂಡು, ನನಗೆ ನನ್ನ ಅಮ್ಮ ಮತ್ತು ಅಜ್ಜಿ ಸುಮಾರು ಒಂದು ತಿಂಗಳ ಕಾಲ ಎರಡೂಟೆ ಶೆಟ್ಟಿ ಹಾಲು ಕುಡಿಸಿದ್ದರಂತೆ. ಅದಕ್ಕೆ ಈಗಲೂ ನನಗೆ ಹಸಿವು ಜಾಸ್ತಿ. ಇದು ನನ್ನ ಅಮ್ಮನ ನಂಬಿಕೆ.
1. “ನಮ್ಮ ಮಗನ್ಗೆ ಸೆಟ್ಟಿಹಾಲು ಕುಡ್ಸಿದ್ರಿಂದಲೇ ಜೀರ್ಣಶಕ್ತಿ ಜಾಸ್ತಿ. ಎಷ್ಟು ಸಲ ಉಂಬಾಕಿಕ್ಕಿದ್ರೂ ಜಡಿತಾನೆ ಮನಗಾರ…. ಹಿಟ್ಟುಂಬಾಕೆ ಕೊಡೋದು ರವೋಟು ತಡವಾದ್ರೂ ಲಾವ್ ಲಾವ್ ಅಂತಾನೆ ಕಣುಗ್ಗೇ.. ”
2. “ಅಯ್ಯೋ… ನಮ್ಮ ಮಗ್ಳಿಗೆ ತಿಂದಿದ್ದು ಅರಾಜ್ಞೆನೇ ಆಗಲ್ಲ. ಗಂಜಳದ್ ಗಡಿಗೆ ಕೂತಂಗೆ ಕೂತಿರ‌್ತಾಳೆ ಕಣಮ್ಮಣ್ಣಿ. ರವೋಟು ಚುರುಕಿಲ್ಲಾ… ಸೆಟಮುಟ್ಗೆ ಇಲ್ಲ. ಕೋಳಿ ತಿಂದಂಗೆ ಈಟೀಟೇ ತಿಮ್ತಾಳೆ. ನಮ್ಮತ್ತೆ ಮನೆವೊಳಗಿದ್ರೆ ಸಾಕು, “ನಿಮ್ಮಮ್ಮ ಏನಮ್ತಾ ಹೆತ್ತು ಮೊರಕ್ಕೆ ಹಾಕಿದ್ಳೋ ನಿನ್ನ… ತವರು ಮನೆ ಸೇರ‌್ಕಂಡು ಎಮ್ಮೆ ಹಾಲು ಕುಡ್ಸಿ ಕುಡ್ಸಿ ನನ್ನ ಮೊಮ್ಮಗ್ಳುನ್ ಮಂದ ಮಾಡಾಕಿದ್ದೀಯ’ ಅಮ್ತಾ ನಮ್ಮತ್ತೆ ಬಾಯಿಗ್ ಬಂದಂಗ್ ಬೈತಾಳೆ ಕಣೋಗುಗ್ಗೆ.
3. “ಆ ಗೊಲ್ಲರ ಸಿತ್ತರನಿಂಗಪ್ಪ ಒಂದು ಲೋಟ ಸೆಟ್ಟಿಹಾಲು ಕರ‌್ದು ನಮ್ಮ ಹುಡ್ಗಿಗೆ ಕುಡಿಯಾಕೆ ಕೊಟ್ಟ. ಇಸ್ಕೂಲಿಗೆ ಓದೋಕ್ ಹೋಗೋ ಹುಡ್ಗಿ ರವೋಟು ಚುರುಕ್ ಬರಲಿ ಅಂತಾ ತಂದು ಕುಡಿಯಾಕೆ ಕೊಟ್ಟೆ… ಆ ಸೀಮ್ಗಿಲ್ದೋಳು ಅಬ್ಬುಳಿಸ್ತಿದ್ದಳು… ಹಾಲ್ಗೇನ್ ದೆಂಗ್ಲಾಗಿಲ್ಲ ಕಣ್ಮುಚ್ಕಂಡು ಕುಡಿಯೇ ಅಮ್ತಾ ಗದರಿದೇಟ್ಗೆ ಕುಡುದ್ಲು ನೋಡು…”
ಇಂತಹ ಡೈಲಾಗುಗಳು ನನ್ನ ಬಾಲ್ಯಕಾಲದಲ್ಲಿ ನಮ್ಮೂರಿನ ಹೆಂಗಸರ ನಡುವೆ ಸಾಮಾನ್ಯವಾಗಿ ಕೇಳಿಬರುತ್ತಿದ್ದವು.
ಕತ್ತೆ ಹಾಲನ್ನು ಹಸಿವು ಜಾಸ್ತಿಯಾಗಲಿ ಎಂಬುದಕ್ಕಿಂತಲೂ, ತಮ್ಮ ಮಕ್ಕಳು ಏನೇ ತಿಂದರೂ ಚೆನ್ನಾಗಿ ಜೀರ್ಣವಾಗಲಿ ಮತ್ತು ಚುರುಕು ಬುದ್ಧಿಯವರಾಗಲಿ ಎಂದು ಕುಡಿಸುವುದನ್ನು ನಮ್ಮ ಪೂರ್ವಿಕರು ರೂಢಿಮಾಡಿಕೊಂಡಿದ್ದರು. ನಾವು ಪಶುಪಾಲನೆ ಹೆಸರಿನಲ್ಲಿ ಸಾಕಾಣಿಕೆ ಮಾಡುವ ಯಾವುದೇ ಪ್ರಾಣಿಯ ಹಾಲಿಗಿಂತಲೂ ನಾಟಿ ಕೆಂದ್ಹಸುವಿನ ಮತ್ತು ಮೇಕೆಯ ಹಾಲು ಹೆಚ್ಚು ಪುಷ್ಟಿದಾಯಕ ಎಂಬ ನಂಬಿಕೆ ನಮ್ಮ ಪಶುಪಾಲಕ ವರ್ಗಗಳಲ್ಲಿದೆ. ಒಣಕೆಮ್ಮು ದಮ್ಮು ನಾಯಿಕೆಮ್ಮು ಉಬ್ಬಸ ಅಸ್ತಮಾ ಕ್ಷಯ ಶೀತ ನೆಗಡಿಯಂತಹ ಕಾಯಿಲೆಗಳಿಗೆ ಮೇಕೆಯ ಹಾಲು ರಾಮಬಾಣವಂತೆ. ಇಂತಹ ನಂಬಿಕೆಯೇ ಗಾಂಧಿತಾತ ಮೇಕೆಹಾಲು ಸೇವಿಸುವುದರ ಹಿಂದಿನ ಕಾರಣವೂ ಇರಬಹುದು. ಅದಾಗಲೇ ಕರೆದ ಮೇಕೆಯ ಅಥವಾ ನಾಟಿ ಆಕಳಿನ ಬಿಸಿಹಸಿ ಹಾಲು ತಾಯಿಯ ಹಾಲಿಗೆ ಪರ್ಯಾಯವೆಂಬ ನಂಬಿಕೆಯು ನಿಜದ ನಡೆಯಾಗಿ ಉಸಿರಾಡುತ್ತಾ ತಾಯಿಯ ಹಾಲಿನಿಂದ ವಂಚಿತರಾದ ಮಕ್ಕಳಿಗೆ ಪರ್ಯಾಯವಾಗಿರುವುದು ಸುಳ್ಳಲ್ಲ. ಅವಾಗ್ಲೇ ಕರೆದು ಅವಾಗ್ಲೇ ಕುಡಿಯುವ ಬಿಸಿಹಾಲು ಕಾಮೋತ್ತೇಜಕ ಎಂಬ ನಂಬಿಕೆಯೂ ಇದೆ. ಮದುಚಂದ್ರದ ರಾತ್ರಿ ಒಂದು ಚೊಂಬು ಬಿಸಿಹಾಲನ್ನು ಲೋಟದೊಂದಿಗೆ ಬಿಡದಿ ಮನೆಯಲ್ಲಿ ನವವಿವಾಹಿತರಿಗಾಗಿ ಇರಿಸುವ ಆಚರಣೆಯ ಗುಟ್ಟು ಇದರ ಹಿಂದಿರಬಹುದು. ಇಂದಿಗೂ ನನ್ನ ಆರೋಗ್ಯ ಮತ್ತು ದೇಹ ಅತ್ಯಂತ ಸುಸ್ಥತಿಯಲ್ಲಿರುವುದರ ಕ್ರೆಡಿಟ್ ತಾಯಿಯ ಹಾಲು ಮಾತ್ರವಲ್ಲದೆ ಆಕಳ ಹಸಿಹಾಲು, ನಾಟಿಕೋಳಿ ಮೊಟ್ಟೆ, ಕತ್ತೆಹಾಲು, ಮೇಕೆಹಾಲು, ಹೊಲಮಾಳದ ಬೆರಕೆ ಸೊಪ್ಪುಸದೆ ಮುಂತಾದ ದೇಶಿ ಸಾವಯವ ಆಹಾರಕ್ಕೆ ಸಲ್ಲಬೇಕು.
ನಾನು ಈಗಾಗಲೇ ಮೇಲೆ ಹೇಳಿದಂತೆ ಕತ್ತೆಹಾಲನ್ನು ಶೆಟ್ಟಿಹಾಲು ಎಂದು ಕರೆಯುತ್ತೇವೆ. ಮಡಿವಾಳ ಸಮುದಾಯದವರು ಕತ್ತೆಯ ಮೇಲೆ ಬಟ್ಟೆಯ ಗಂಟನ್ನು ಹೇರುತ್ತಾರೆ. ಮಡಿವಾಳರನ್ನು ಮಡಿವಾಳ ಶೆಟ್ಟರು ಎಂಬ ಹೆಸರಿನಿಂದ ಕರೆಯುವ ರೂಢಿ ಇತ್ತು. ಅವರ ಕತ್ತೆಯ ಹಾಲನ್ನು ಶೆಟ್ಟಿ ಹಾಲು ಎಂದು ಕರೆಯುತ್ತಾ… ಕ್ರಮೇಣವಾಗಿ ಯಾರೇ ಕತ್ತೆ ಸಾಕಿದರೂ ಕತ್ತೆ ಹಾಲನ್ನು ಶೆಟ್ಟಿಹಾಲು ಎಂದು ಕರೆಯುವುದು ಜನವಾಡಿಕೆಯ ನುಡಿಗಟ್ಟಾಯಿತು ಅನ್ನಿಸುತ್ತದೆ.
ಕವಿ ಡಾ.ಸಿದ್ಧಲಿಂಗಯ್ಯನವರ “ಕತ್ತೆ ಮತ್ತು ಧರ್ಮ” ಎಂಬ ಕವಿತೆಯಲ್ಲಿ ಬರುವ ಮುತ್ತುರತ್ನಗಳ ವ್ಯಾಪಾರದ ಶೆಟ್ಟಿಯು ಅಗಸನೊಬ್ಬನ ಮಡಿದ ಕತ್ತೆಯ ಸಮಾಧಿಗೆ ಹರಕೆಹೊತ್ತು ತನ್ನ ವ್ಯಾಪಾರದಲ್ಲಿ ಲಾಭ ಗಳಿಸುತ್ತಾನೆ. ಧನಿಕ ಶೆಟ್ಟಿಯು ಕತ್ತೆಯ ಗೋರಿಯ ಮೇಲೆ ಗುಡಿ ಕಟ್ಟಿಸುತ್ತಾನೆ.
ಕತ್ತೆಯ ಹಾಲಿನ ಸುತ್ತಲೂ ಚಾಲ್ತಿಯಲ್ಲಿರುವ ಅನೇಕ ನಂಬಿಕೆಗಳಂತೆಯೇ ಕತ್ತೆಯ ಅರಚುವಿಕೆಯ ಬಗ್ಗೆಯೂ ಒಂದು ನಂಬಿಕೆ ನಮ್ಮಲ್ಲಿದೆ. ಸೊಂಟಕ್ಕೆ ಉಡುದಾರ ಕಟ್ಟದಿರುವ ಎಳೆಮಕ್ಕಳು, ಕತ್ತೆ ಅರಚುವುದನ್ನು ಕೇಳಿಸಿಕೊಂಡರೆ ಅವರ ತರಡುಬೀಜಗಳು ಬಾತುಕೊಂಡು ಖಾಯಂಆಗಿ ಹೋರಿದೊಲ್ಡುಗಳಾಗುತ್ತವೆ. ಕತ್ತೆ ಕೂಗು ಕೇಳಿಸಿಕೊಂಡ ಮಕ್ಕಳಿಗೆ ಹೋರಿದೊಲ್ಡು ಬರದಂತೆ ತಪ್ಪಿಸಲು ಉಡುದಾರ ಕಟ್ಟಬೇಕೆಂಬುದು ಜನಪದರ ನಂಬಿಕೆ. ಕತ್ತೆಯನ್ನು ಭಗವಂತ ವಾಸುದೇವನೆಂದು ಮತ್ತು ಕೃಷ್ಣನಿಗೆ ಕತ್ತೆಯು ಮರದ ಪೊಟರೆಯಲ್ಲಿ ನಿಂತು ಉಸಿರು ಕೊಟ್ಟ ಕಾರಣದಿಂದ ಕತ್ತೆಯು ವಾಸುದೇವ ಎಂದು ಕರೆಸಿಕೊಂಡಿತೆಂಬ ಜಾನಪದ ಕತೆಗಳಿವೆ. “ಕತ್ತೆಗೆ ಗೊತ್ತೆ ಕಸ್ತೂರಿ ಪರಿಮಳ” ಎಂಬುದು ಪ್ರಸಿದ್ಧ ಗಾದೆಮಾತು. ದಡ್ಡರನ್ನು ಕತ್ತೆ ಎಂದು ಹಂಗಿಸಲಾಗುವ ಹಾಗೂ ಜಾಣ ಎಂಬ ಪದಕ್ಕೆ ಕತ್ತೆ ಎಂಬ ಪದವೇ ಸೂಕ್ತ ವಿರುದ್ಧ ಪದವೆಂಬ ಮಟ್ಟಿಗೆ ಜನರಲ್ಲಿ ಅಪವ್ಯಾಕರಣ ಸೃಷ್ಟಿಸಿರುವ ಕತ್ತೆಯ ಹಾಲನ್ನೇ ಬುದ್ಧಿಯನ್ನು ಚುರುಗೊಳಿಸುವ ಸಲುವಾಗಿ ಕುಡಿಸುವ ರೂಢಿ ಇರುವುದು ದ್ವಂದ್ವಾತ್ಮಕವಾಗಿದೆ.
ಊರಿನ ಬೀದಿಗಳಲ್ಲಿ “ಕತ್ತೆ ಹಾಲು ಬೇಕೇನಮ್ಮ ಕತ್ತೆ ಹಾಲು” ಎಂದು ಕೂಗುತ್ತಾ ಬರುವವನ ಬಟ್ಟೆಬರೆ ತಲೆ ಮೈಕೈ ನೋಡಿದರೆ ಸ್ನಾನ ಕಂಡು ಏಸೊರ್ಷಗಳಾಗಿವೆಯೋ ಎಂಬಂತೆ ಕೊಳಕಾಗಿ ಕಾಣಿಸುತ್ತಾನೆ. ಹಾದಿಬೀದಿ ಸುತ್ತುವಾಗ ಬಿಸಿಲಿಗೆ ಮೈನಿಂದ ಹರಿಯುವ ಬೆವರನ್ನು ಸೀಟಿಕೊಂಡ ಕೈಗಳಿಂದಲೇ ಕತ್ತೆಯ ಮೈಯನ್ನೂ ಒರೆಸಿರುತ್ತಾನೆ. ಕೈಲಿಡಿದ ಹಗ್ಗ, ಹೆಗಲ ಮೇಲಿನ ಒಲ್ಲಿ, ಒಳಲೆ ಲೋಟ ಇರಿಸಿರುವ ಕೈಚೀಲ ಎಲ್ಲವೂ ಕೊಳೆ ಮೆತ್ತಿಕೊಂಡೇ ಇರುತ್ತವೆ. ಅವನು ಬೀದಿಯಲ್ಲಿ ಕತ್ತೆಯಿಂದ ಹಾಲು ಕರೆದುಕೊಡುವಾಗ ಕತ್ತೆಯ
ಕೆಚ್ಚೆಲನ್ನು ಶುದ್ಧ ನೀರಿನಿಂದ ತೊಳೆಯುವುದಿಲ್ಲ. ಕತ್ತೆಯ ಹಾಲಿನಲ್ಲಿ ರೋಗನಿರೋಧಕ ಶಕ್ತಿಯಿದೆ, ಉತ್ತಮ ಔಷಧೀಯ ಪೌಷ್ಟಿಕಾಂಶಗಳಿವೆ ಎಂದು ನಂಬಿನೆಚ್ಚಿ ನಮ್ಮ ಎಳೆಮಕ್ಕಳಿಗೆ ಕುಡಿಸುವ ಇಂತಹ ಹಾಲು ರೋಗವನ್ನು ತರುವ ಕೀಟಾಣುಗಳನ್ನೂ ಹೊತ್ತು ತರಬಹುದಲ್ಲವೇ? ಜೀರ್ಣಶಕ್ತಿ, ಮಲಬದ್ಧತೆ, ಶೀತ, ಜ್ವರ, ಕ್ಷಯ, ಉಬ್ಬಸ, ಒಣಕೆಮ್ಮು, ಕಾಮಾಲೆ ಮುಂತಾದ ಸಮಸ್ಯೆಗಳ ವಿರುದ್ಧ ಕತ್ತೆಹಾಲು ಉತ್ತಮ ಮದ್ದೆಂದು ಮತ್ತು ಅತ್ಯಂತ ಪುಷ್ಟಿಕರವೆಂದು ವೈದ್ಯಕೀಯ ಸಂಶೋಧನೆಗಳು ರುಜುವಾತುಪಡಿಸಿವೆಯೇ?
ಕತ್ತೆಹಾಲು ಮಾರಾಟ ಮಾಡುವ ಹೈನುಗಾರಿಕೆಯ ಆರ್ಥಿಕ ಉದ್ದೇಶದಿಂದ ಸಾಕುವ ಕತ್ತೆಗಳಿಗೆ ಅವುಗಳ ಮಾಲೀಕರು, ಹೆಚ್ಚು ಹಾಲು ಕರೆಯಲೆಂದು ಕೃತಕ ಆಹಾರಗಳನ್ನು ತಿನ್ನಿಸಿ, ಹಾರ್ಮೋನು ಇಂಜೆಕ್ಷನ್ ಗಳನ್ನು ಚುಚ್ಚಿಸುತ್ತಾರೆ. ಇಂತಹ ಹಾಲು ನಾಟಿಹಸುವಿನ ಹಾಲಿಗಿಂತಲೂ ಆರೋಗ್ಯದಾಯಕವಾಗಿರಲಾರದು. ಹೀಗೆಂದಾಗ ಕತ್ತೆ ಹಾಲಿನ ಮಾರಾಟ ಎಂಬುದು ಒಂದು ದಂಧೆಯೇ ಸರಿ.
ಬಾಲ್ಯದಲ್ಲಿ ನನಗೆ ನನ್ನ ಅಮ್ಮ ಮತ್ತು ಅಜ್ಜಿ ಕುಡಿಸಿರುವ ಕತ್ತೆಹಾಲು ನಮ್ಮೂರಿನಲ್ಲಿ ಸುಣ್ಣದ ವ್ಯಾಪಾರ ಮಾಡುತ್ತಿದ್ದ
ಬಂಜಾರರ ಮನೆಯ ಕತ್ತೆಗಳ ಹಾಲು. ಲಂಬಾಣಿ ಜನಾಂಗದ ಸುಣ್ಣಗಾರರ ಆ ಕತ್ತೆಗಳು, ದನಕರು ಕುರಿಮಂದೆ ಜೊತೆಯಲ್ಲಿ ಕಾಡುಮೇಡು ತಿರುಗಿ ಹಸಿರು ಹುಲ್ಲು ಸೊಪ್ಪುಸದೆ ಗಿಡಗೆಂಟೆ ಮೇಯ್ದು ಹಳ್ಳಕೊಳ್ಳಗಳ ಖನಿಜಯುಕ್ತ ನೀರು ಕುಡಿದು ದಿಂಪಾಗಿ ಮನೆಗೆ ಬರುತ್ತಿದ್ದವು. ಶನಿವಾರದ ಅಕ್ಕಿರಾಂಪುರದ ಸಂತೆ ಹಾಗೂ ಸೋಮವಾರದ ಕೊರಟಗೆರೆ ಸಂತೆಗಳಿಗೆ ಸುಣ್ಣಕಲ್ಲು ಹೇರುಹಾಕುವ ದಿನಗಳಲ್ಲಿ ಆ ಕತ್ತೆಗಳಿಗೆ ಕಡ್ಡಾಯವಾಗಿ ಸ್ನಾನ ಮಾಡಿಸುತ್ತಿದ್ದರು. ಹಾಗೊಂದು ವೇಳೆ ಸ್ನಾನ ಮಾಡಿಸದಿದ್ದ ಪಕ್ಷದಲ್ಲಿ ಬಿಸಿಸುಣ್ಣದ ಧೂಳಿನಲ್ಲಿಯೇ ಕತ್ತೆಯ ಮೈನಲ್ಲಿದ್ದ ಕ್ರಿಮಿಕೀಟಾದಿಗಳೆಲ್ಲವೂ ಸುಟ್ಟುಹೋಗಿರುತ್ತಿದ್ದವು. ಅಂತಹ ಕತ್ತೆಗಳ ಹಾಲು ನಿಜವಾಗಿಯೂ ಕಲಬೆರಕೆ ಇರದೆ ಸಾವಯವವೂ ಪೌಷ್ಟಿಕವೂ ಆಗಿರುತ್ತಿತ್ತು. ಪಟ್ಟಣಗಳಲ್ಲಿ ಮನೆ ಬಾಗಿಲಿಗೆ ಹಾಲು ಕರೆದುಕೊಡಲು ತರುವ ಕತ್ತೆಗಳ ಹಾಲು ಹೊಲಮಾಳಗಳಲ್ಲಿ ತಿರುಗಾಡಿ ನೆಲಕಚ್ಚಿ ಹಸಿರ‌್ಹುಲ್ಲು ಮೇಯ್ದ ಗ್ರಾಮೀಣ ಕತ್ತೆಗಳ ಹಾಲಿನಂತೆ ಸ್ವಾದಿಷ್ಟವಾಗಿರಲು ಸಾಧ್ಯವಿಲ್ಲ.
ನಮ್ಮ ಪೂರ್ವಿಕರ ಕಾಲದಿಂದಲೂ ಎಳೆಮಕ್ಕಳಿಗೆ ಕತ್ತೆಹಾಲು ಕುಡಿಸುವ ರೂಢಿ ಚಾಲ್ತಿಯಲ್ಲಿರುವ ಸಂಗತಿ. ಆದರೆ ಕತ್ತೆ ಹಾಲು
ಮಕ್ಕಳ ಮತ್ತು ಮುದುಕರ ಆರೋಗ್ಯಕ್ಕೆ ಹಸು ಎಮ್ಮೆ ಮೇಕೆಯ ಹಾಲಿಗಿಂತಲೂ ಉತ್ತಮವೆಂದು ವೈಜ್ಞಾನಿಕ ಸಂಶೋಧನೆಗಳು ದೃಢೀಕರಿಸಿವೆಯೇ?
ಕತ್ತೆಹಾಲು ಎಲ್ಲಾ ಸಸ್ತನಿಗಳ ಹಾಲಿಗಿಂತಲೂ ಮತ್ತು ತಾಯಿಯ ಹಾಲಿಗಿಂತಲೂ ಶ್ರೇಷ್ಠವೆಂಬ ಮಿಥ್ಯಾಕಥೆಗಳನ್ನು ಹೆಣೆಯಲಾಗಿದೆ. ಮಕ್ಕಳಿಗೆ ಕತ್ತೆಹಾಲನ್ನು
ಕುಡಿಸಲೇಬೇಕೆಂಬುದಾಗಲೀ ಅಥವಾ ರೋಗನಿರೋಧಕ ಎಂಬುದಾಗಲೀ ಒಂದು ದೊಡ್ಡ ಮೂಢನಂಬಿಕೆ.
ಡಾ.ವಡ್ಡಗೆರೆ ನಾಗರಾಜಯ್ಯ
8722724174
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy