ಮುಂಗಾರು ಮಳೆ’ಯಿಂದ ಇಲ್ಲಿವರೆಗೂ ಜಯಂತ್ ಕಾಯ್ಕಿಣಿ ಹಾಡುಗಳನ್ನು ಬರೆಯುತ್ತಲೇ ಇದ್ದಾರೆ. ಒಂದೊಂದು ಹಾಡು ಕೂಡ ಸಿನಿಮಾ ಪ್ರೇಮಿಗಳನ್ನು ಸೆಳೆಯುತ್ತಲೇ ಇದೆ. ಆದರೆ, ಜಯಂತ್ ಕಾಯ್ಕಿಣಿ ಸಿನಿಮಾಗಾಗಿ ಒಂದು ಪ್ರೇಮ ಕವಿತೆಯನ್ನು ಬರೆಯುವುದಕ್ಕೆ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದರಂತೆ !
‘ಗಾಳಿಪಟ’ ಸಿನಿಮಾದ ಮಿಂಚಾಗಿ ನೀನು ಬರಲು ಹಾಡನ್ನು ಬರೆಯಲು 20 ದಿನ ಯಾಕೆ ತೆಗೆದುಕೊಂಡರು ಅನ್ನೋದನ್ನು ಹೇಳಿಕೊಂಡಿದ್ದಾರೆ.’ಮುಂಗಾರು ಮಳೆ’ ಬಳಿಕ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ನಲ್ಲಿ ‘ಗಾಳಿಪಟ’ ಸಿನಿಮಾ ಸೆಟ್ಟೇರಿತ್ತು. ಈ ಸಿನಿಮಾಗೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದರು. ಯೋಗರಾಜ್ ಭಟ್ ಈ ಸಿನಿಮಾದಲ್ಲಿಯೂ ಜಯಂತ್ ಕಾಯ್ಕಿಣಿ ಅವರಿಂದ ಜನಪ್ರಿಯ ಹಾಡನ್ನು ಬರೆಸುವ ನಿರ್ಧಾರ ಮಾಡಿದ್ದರು. ಅದುವೇ “ಮಿಂಚಾಗಿ ನೀನು ಬರಲು..” ಅನ್ನೋ ಜನಪ್ರಿಯ ಹಾಡು.
ಜಯಂತ್ ಕಾಯ್ಕಿಣಿ ಈ ಹಾಡನ್ನು ಬರೆಯುವುದಕ್ಕೆ ಸಿಕ್ಕಾಪಟ್ಟೆ ಪರದಾಡಿದ್ದಂತೆ. ಇದೊಂದು ಹಾಡು ಬರೆಯುವುದಕ್ಕೆ ಬರೋಬ್ಬರಿ 20 ದಿನಗಳನ್ನು ತೆಗೆದುಕೊಂಡಿದ್ದಾಗಿ ಸ್ವತ: ಜಯಂತ್ ಕಾಯ್ಕಿಣಿ ಅವರೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಒಂದು ಹಾಡನ್ನು ಬರೆಯಲು ಇಷ್ಟೊಂದು ದಿನ ಯಾಕೆ ತೆಗೆದುಕೊಂಡರು? ಅನ್ನೋದನ್ನು ಅವರೇ ಹೇಳಿಕೊಂಡಿದ್ದಾರೆ.
“ಭಾರತದ ದೇಶದಲ್ಲಿರುವ ಕೋಟ್ಯಾಂತರ ಹಾಡುಗಳಲ್ಲಿ ಶೇ.99ರಷ್ಟು ಹಾಡುಗಳು ಪ್ರೀತಿ ಮೇಲೆನೇ ಇವೆ. ಪ್ರೀತಿ ಮೇಲೆ ಹೊಸದನ್ನು ಹೇಗೆ ಬರೆಯುತ್ತಿರಾ? ಪ್ರತಿ ಸಲ ಏನು ತರುತ್ತೀರ? ತುಂಬಾ ಕಷ್ಟ. ಆಮೇಲೆ ಅದು ನನ್ನ ಜೀವನದ ರಚನೆ ಅಲ್ಲ. ಯಾವುದೋ ವ್ಯಕ್ತಿಗೆ ಯಾರದ್ದೋ ವ್ಯಕ್ತಿ ಮೇಲೆ ಪ್ರೀತಿಯಾಗಿದೆ. ಅದಕ್ಕೆ ನಾನು ಹಾಡು ಬರೆದು ಕೊಡೋದು ಇದೆಯಲ್ಲ. ಅದೇ ಒಂದು ದೊಡ್ಡ ಸ್ಕಿಲ್.” ಜಯಂತ್ ಕಾಯ್ಕಿಣಿ ಹೇಳಿದ್ದಾರೆ.
“ನನ್ನ ಕಥೆಗಳು ನೀವು ಹೇಳಿದ್ರಲ್ಲ ಕಥೆಗಳನ್ನ ಬರೆಯೋದಕ್ಕೆ ನಾನು ಎರಡು ದಿನ ತೆಗೆದುಕೊಳ್ಳುತ್ತೇನೆ. ಒಂದು ಕವಿತೆ ಬರೆಯುವುದಕ್ಕೆ ಎರಡು ದಿನ ತೆಗೆದುಕೊಳ್ಳುತ್ತೇನೆ. ಕವಿತೆಗಳನ್ನ ರಿಫೈನ್ ಎಲ್ಲ ಮಾಡುವುದಕ್ಕೆ ಆಗುತ್ತೆ. ಅದೇ ಒಂದು ಸಿನಿಮಾ ಹಾಡು ಬರೆಯುವುದಕ್ಕೆ ನಾನು 15, 15 ದಿವಸ, 20, 20 ದಿವಸ ತೆಗೆದುಕೊಂಡಿದ್ದೇನೆ. ಮಿಂಚಾಗಿ ನೀನು ಬರಲು 20 ದಿನ ನಾನು ಕಷ್ಟ ಪಟ್ಟಿದ್ದೇನೆ. ಇದನ್ನು ನೀವು ನಂಬುತ್ತೀರಾ?” ಎಂದು ಜಯಂತ್ ಕಾಯ್ಕಿಣಿ ಹೇಳಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q