ನಂಜನಗೂಡು: ಕಾಡಿನಲ್ಲಿ ಜಿಂಕೆಗಳನ್ನು ಬೇಟೆಯಾಡಿ ಮಾಂಸ ಮಾಡುತ್ತಿದ್ದ ವೇಳೆ ರೈತರನ್ನು ಕಂಡು ಬೇಟೆಗಾರರು ಪರಾರಿಯಾದ ಘಟನೆ ನಂಜನಗೂಡು ತಾಲೂಕಿನ ಕೋಣನೂರು-ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ತಪ್ಪಿಸಿಕೊಂಡು ಹೋಗುವ ಭರದಲ್ಲಿ ಬೇಟೆಗಾರರ ಜೀಪು ಮಗುಚಿ ಬಿದ್ದ ಘಟನೆಯೂ ನಡೆದಿದೆ.
ಕೋಣನೂರು ಗ್ರಾಮದ ಹೊರವಲಯದ ಎತ್ತಿನ ಮುಂಟಿ ಎಂಬ ಸ್ಥಳದಲ್ಲಿ ರಾತ್ರಿಯ ಸಮಯದಲ್ಲಿ ಜಿಂಕೆಯನ್ನು ಬೇಟೆಯಾಡಿದ ಬೇಟೆಗಾರರು, ಮರಕ್ಕೆ ನೇತು ಹಾಕಿ, ಮಾಂಸ ಮಾಡುತ್ತಿದ್ದರು. ಈ ವೇಳೆ ಜಮೀನಿನಲ್ಲಿದ್ದ ರೈತರನ್ನು ಕಂಡು ಹೆದರಿ, ಜೀಪು ಹತ್ತಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಗಾಬರಿಯಿಂದ ತೆರಳುವ ಭರದಲ್ಲಿ ಜೀಪು ಪಲ್ಟಿಯಾಗಿದ್ದು, ಜೀಪನ್ನು ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ಕೋಣನೂರು ಮತ್ತು ಚುಂಚನಹಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆಗಳು ಯಥೇಚ್ಛವಾಗಿವೆ, ಕುರುಚಲು ಅರಣ್ಯ ಪ್ರದೇಶವಾಗಿರುವ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಜಿಂಕೆಗಳು ವಾಸಿಸುತ್ತಿವೆ. ಜೊತೆಗೆ ಕೃಷ್ಣಮೃಗಗಳು ಕೂಡ ವಾಸಿಸುತ್ತಿವೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಿಂಕೆಗಳು ಬೇಟೆಗಾರರಿಗೆ ಬಲಿಯಾಗುತ್ತಿವೆ ಎಂದು ಕೋಣನೂರು ಮತ್ತು ಚುಂಚನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ರಾತ್ರಿಯ ಸಮಯದಲ್ಲಿ ಗಸ್ತು ಬಾರದೆ ನಿರ್ಲಕ್ಷ ವಹಿಸಿರುವುದರಿಂದ ಬೇಟೆಗಾರರು ರಾಜಾರೋಷವಾಗಿ ಬೇಟೆಯಾಡುತ್ತಿದ್ದಾರೆ. ಪ್ರತಿ ದಿನ ರಾತ್ರಿ ವೇಳೆ ಪ್ರಾಣಿಗಳ ಬೇಟೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


