ಔರಾದ್: ಪತ್ರಕರ್ತರು ಸಾಮಾಜಿಕ ನ್ಯಾಯಕ್ಕಾಗಿ ಜನರ ಧ್ವನಿಯಾಗಬೇಕು ಎಂದು ಮಾಜಿ ಸಚಿವ ಹಾಲಿ ಶಾಸಕ ಪ್ರಭು ಚವ್ಹಾಣ ಕರೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯುನಿಯನ್ ಸಂಘದಿಂದ ಆಯೋಜಿಸಿದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಎಲ್ಲೆಡೆ ನಿರೀಕ್ಷೆಗಳು ಹುಸಿಯಾದಾಗ ಜನಸಾಮಾನ್ಯರು ನ್ಯಾಯದ ಭರವಸೆ ಮಾಡುವುದು ಕೇವಲ ಪತ್ರಿಕಾ ಮಾಧ್ಯಮದ ಮೇಲೆ ಎಂಬುದನ್ನು ಅರಿಯಬೇಕು. ಪತ್ರಕರ್ತರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಕೆಲಸ ಈ ಹಿಂದಿನಿಂದಲೂ ಮಾಡಿದ್ದು, ಮುಂದೆಯು ಸಹ ಮಾಡುತ್ತೇನೆ. ಪತ್ರಕರ್ತರ ಅನುಕೂಲಕ್ಕೆ ಜೀವವಿಮೆಯಂತಹ ಸೌಲಭ್ಯಗಳು ನೀಡುವ ಕುರಿತು ಯೋಚಿಸುತ್ತೇನೆ ಎಂದರು.
ತಾಲೂಕಿನಲ್ಲಿ ಪತ್ರಿಕಾ ಭವನ ಇಲ್ಲದಿರುವುದು ನನ್ನ ಗಮನಕ್ಕೂ ಇದೆ. ಹಿಂದಿನಿಂದಲೂ ಭವನ ನಿರ್ಮಾಣದ ಕುರಿತು ಪತ್ರಕರ್ತರ ಜೊತೆ ಚರ್ಚಿಸಿದ್ದೇನೆ. ಪಟ್ಟಣ ಪ್ರದೇಶದಲ್ಲಿ ನಿವೇಶನ ದೊರೆತಲ್ಲಿ ಶೀಘ್ರ ಪತ್ರಿಕಾ ಭವನ ನಿರ್ಮಿಸಲು ಸಿದ್ದನಿರುವುದಾಗಿ ಭರವಸೆ ನೀಡಿದರಲ್ಲದೇ. ಎಲ್ಲ ಪತ್ರಕರ್ತರು ಒಂದಾಗಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದರೆ ನನ್ನ ಕೆಲಸಕ್ಕೂ ವೇಗ ದೊರೆಯುತ್ತದೆ ಎಂದರು.
ಹಿರಿಯ ಸಂಪಾದಕ ಸದಾನಂದ ಜೋಶಿ ಉಪನ್ಯಾಸ ನೀಡಿ ಮಾತನಾಡಿ, ಪತ್ರಕರ್ತರು ಸಮಾಜ ಸೇವಕರೇ ಹೊರತು ಅಧಿಪತಿಗಳಲ್ಲ. ಜನರ ನಿರೀಕ್ಷೆ ಹುಸಿಯಾಗದಂತೆ ಆತ್ಮಾವಲೋಕನ ಮಾಡಿಕೊಂಡು ಕೆಲಸ ಮಾಡಬೇಕು. ಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಿಂದ ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ತೀರ ಹಿನ್ನಡೆ ಉಂಟಾದರೂ ಸಹ ವಿಶ್ವಾಸಾರ್ಹತೆಗೆ ಯಾವ ಧಕ್ಕೆ ಬಂದಿಲ್ಲ. ಸಮಾಜ ಪತ್ರಕರ್ತರಿಗೆ ನೋಡುವ ದೃಷ್ಟಿಕೋನ ಬದಲಾಗಬೇಕು. ಭಯ, ಆಡಂಬರ, ಪ್ರತಿಷ್ಠೆ ಪತ್ರಕರ್ತರ ಹತ್ತಿರಕ್ಕೂ ಸುಳಿಯಬಾರದು ಎಂದು ಕಿವಿಮಾತು ಹೇಳಿದರು.
ಆಶ್ರಯ ಯೋಜನೆಯಡಿ ಪತ್ರಕರ್ತರಿಗೆ ಮನೆಗಳು ದೊರೆಯಲಿ:
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಎಂಜೆಯು ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ನಕಿರೆಕಂಟಿ ಮಾತನಾಡಿ, ಹಗಲಿರುಳು ಸಮಾಜದ ಅಭಿವೃದ್ಧಿಗಾಗಿ ದುಡಿಯುವ ಪತ್ರಕರ್ತರಿಗೆ ಆಶ್ರಯ ಯೋಜನೆಯಲ್ಲಿ ಮನೆಗಳು ದೊರೆಯಬೇಕು. ಆರೋಗ್ಯದ ದೃಷ್ಟಿಯಿಂದ ಆರೋಗ್ಯ ವಿಮೆಗಳು ಮಾಡಿಸಬೇಕು.
ಪಪಂ ವಾರ್ಷಿಕ ಬಜೆಟ್‌ನಲ್ಲಿ ಕನಿಷ್ಟ 20 ಲಕ್ಷ ರೂಪಾಯಿ ಮೀಸಲಿಟ್ಟು ತುರ್ತು ಸಂದರ್ಭಗಳಲ್ಲಿ ಪಟ್ಟಣದ, ತಾಲೂಕಿನ ಪತ್ರಕರ್ತರಿಗಾಗಿ ವಿನಿಯೋಗಿಸಬೇಕು ಎಂದರು. ತಾಲೂಕಿನ ಎಲ್ಲ ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪೂಜ್ಯ ಬಸವಲಿಂಗ ದೇವರು, ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ, ತಾ.ಪಂ. ಸಹಾಯಕ ನಿರ್ದೇಶಕ ಸುದೇಶ ಕುಮಾರ್, ಶಿವಕುಮಾರ್ ಘಾಟೆ, ಎಪಿಎಂಸಿ ಅಧ್ಯಕ್ಷ ಧೋಂಡಿಬಾ ನರೋಟೆ, ಹಿರಿಯ ಪತ್ರಕರ್ತ ಅನೀಲಕುಮಾರ್ ದೇಶಮುಖ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲಮಾಜೆ, ಶಿವಾಜಿ ಪಾಟೀಲ್, ಸಂಘದ ಜಿಲ್ಲಾಧ್ಯಕ್ಷ ಪ್ರವೀಣಕುಮಾರ್, ತಾಲೂಕಾಧ್ಯಕ್ಷ ಸಂತೋಷ ಚಾಂಡೇಶ್ವರೆ, ಬಸವರಾಜ ಶಿವಪೂಜೆ, ರವೀಂದ್ರ ಮುಕ್ತೆದಾರ್, ರಾಮದಾಸ ಪಾಟೀಲ್, ಶಿವಕುಮಾರ್ ಬಿರಾದಾರ್, ಶಿವಾನಂದ ಬೇದ್ರೆ, ಅಂಕುಶ ವಾಡಿಕರ್, ಬಾಲಾಜಿ ಫಿರಂಗೆ, ಸಂದೀಪ ಪಾಟೀಲ್, ಅಮರ ಮುಕ್ತೆದಾರ್, ಸಂತೋಷ ದಿಂಡೆ, ಪ್ರಭುಲಿಂಗ, ಲಕ್ಷ್ಮಣ, ಶಿವರಾಜ, ದಯಾನಂದ ಬಿರಾದಾರ್ ಸೇರಿದಂತೆ ಇನ್ನಿತರರಿದ್ದರು. ಕಸಾಪ ಅಧ್ಯಕ್ಷ ಶಾಲಿವಾನ ಉದಗಿರೆ ಪ್ರಾಸ್ತಾವಿಕ ಮಾತನಾಡಿದರು. ಬಿಎಂ ಅಮರವಾಡಿ ನಿರೂಪಿಸಿದರು.
ವರದಿ: ಅರವಿಂದ ಮಲ್ಲಿಗೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA