ತುಮಕೂರು: ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು ಎಂದು ಕಾಡುಗೊಲ್ಲ ಸಂಘಟನೆಗಳ ಒಕ್ಕೂಟದ ಮುಖಂಡರು ಒತ್ತಾಯಿಸಿದ್ದು, ಹಿರಿಯೂರು ಶಾಸಕಿ ಪೂರ್ಣಿಮಾ ಅವರ ರಾಜಕೀಯ ಒತ್ತಡಕ್ಕೆ ಮಣಿದು ಕಾಡುಗೊಲ್ಲ ಬುಡಕಟ್ಟು ಜನರ ಅಭಿವೃದ್ಧಿಗಾಗಿ ರಚಿಸಿರುವ ನಿಗಮದ ಹೆಸರನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸೋಮವಾರ ಸಮುದಾಯದ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಕಾಡುಗೊಲ್ಲರ ಅಸ್ಮಿತೆ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ. ನಾಗಣ್ಣ, ಕಾಡುಗೊಲ್ಲರನ್ನು ಹಿಂದುಳಿದ ಪ್ರವರ್ಗ-1ರ ಜಾತಿ ಪಟ್ಟಿಗೆ ಸೇರಿಸಿ ಪ್ರತ್ಯೇಕ ಸ್ಥಾನಮಾನ ನೀಡಲಾಗಿದೆ. ಆದರೆ ಮೀಸಲಾತಿ ಸೌಲಭ್ಯ ಕಬಳಿಸಲು ಗೊಲ್ಲ ಸಮುದಾಯ ಮುಂದಾಗಿದ್ದು, ಸರ್ಕಾರದ ಹಂತದಲ್ಲಿ ಗೊಂದಲ ಮೂಡಿಸಲಾಗುತ್ತಿದೆ ಎಂದು ಆರೋಪಿಸಿದರು.
ಸಿರಾ ಉಪಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಕಾಡುಗೊಲ್ಲರ ಅಭಿವೃದ್ಧಿಗಾಗಿ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದರು. ಬಳಿಕ 5 ಕೋಟಿ ಅನುದಾನ ಬಿಡುಗಡೆ ಮಾಡಿ, ವಿಶೇಷ ಅಧಿಕಾರಿ ನೇಮಕ ಮಾಡಿದ್ದರು. ಆದರೆ, ಕಾಡುಗೊಲ್ಲ ಜಾತಿಗೆ ಸೇರದ ಹಿರಿಯೂರು ಶಾಸಕಿ ಪೂರ್ಣಿಮಾ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ಗೊಲ್ಲ- ಕಾಡುಗೊಲ್ಲ ಅಭಿವೃದ್ಧಿ ನಿಗಮ ಎಂದು ಹೆಸರು ಬದಲಾವಣೆ ಮಾಡಲು ಕೇಳಿಕೊಂಡಿದ್ದಾರೆ. ಹೆಸರು ಬದಲಾಯಿಸಿದರೆ ಕಾಡುಗೊಲ್ಲರ ಅವನತಿಗೆ ಕಾರಣವಾಗಲಿದೆ ಎಂದು ನಾಗಣ್ಣ ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಡುಗೊಲ್ಲ ಸಂಘಟನೆಗಳ ಒಕ್ಕೂಟದ ಡಿ.ಮಹಾಲಿಂಗಯ್ಯ, ಕಾಡುಗೊಲ್ಲ ಯುವ ಸೈನ್ಯದ ರಾಜ್ಯ ಘಟಕದ ಅಧ್ಯಕ್ಷ ರಮೇಶ್, ಪದಾಧಿಕಾರಿಗಳಾದ ಆರ್.ಪ್ರಕಾಶ್, ಮುತ್ತುರಾಜ್, ಗೋಪಿ ಹಿರಿಯೂರು, ಸುನಂದ್, ಶೋಭಾ ಮತ್ತಿತರರು ಉಪಸ್ಥಿತರಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700